ಸುಳ್ಯದಲ್ಲಿ ರಾಷ್ಟ್ರೀಯ ಕಬಡ್ಡಿ ಪಂದ್ಯಾಟ: ಮಹಿಳಾ ವಿಭಾಗದಲ್ಲಿ ಟಿಎಂಸಿ ಥಾಣೆ ಚಾಂಪಿಯನ್ - ನ್ಯಾಷನಲ್ ಬೆಂಗಳೂರು ತಂಡ ದ್ವಿತೀಯ
ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಮಹಿಳಾ ವಿಭಾಗದಲ್ಲಿ ಟಿಎಂಸಿ ಥಾಣೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ನ್ಯಾಷನಲ್ಸ್ ಬೆಂಗಳೂರು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತೃತೀಯ ಸ್ಥಾನವನ್ನು ಕನ್ಯಾಕುಮಾರಿ ತಮಿಳು ನಾಡು ಹಾಗೂ ಚತುರ್ಥ ಸ್ಥಾನ ಪಾಂಡಿಚೇರಿ ಪಡೆದು ಕೊಂಡಿತು. 4 ತಂಡಗಳು ಭಾಗವಹಿಸಿದ್ದ ಮಹಿಳಾ ವಿಭಾಗದ ಪಂದ್ಯದ ಲೀಗ್ ವಿಭಾಗದ ಅಂತಿಮ ಪಂದ್ಯದಲ್ಲಿ ರೋಚಕ ಹಣಾಹಣಿಯಲ್ಲಿ ಟಿಎಂಸಿ ಥಾಣೆ ತಂಡ 37-35 ಅಂಕಗಳ ಅಂತರದಲ್ಲಿ ನ್ಯಾಷನಲ್ ಬೆಂಗಳೂರು ತಂಡವನ್ನು ಸೋಲಿಸಿತು. ಈ ಮೂಲಕ ಲೀಗ್ ಹಂತದಲ್ಲಿ 3 ಜಯ ದಾಖಲಿಸಿದ ಟಿಎಂಸಿ ಥಾಣೆ ಪ್ರಥಮ ಸ್ಥಾನಿಯಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಲೀಗ್ ಹಂತದಲ್ಲಿ ಎರಡು ಜಯ ದಾಖಲಿಸಿದ ನ್ಯಾಷನಲ್ಸ್ ಬೆಂಗಳೂರು ದ್ವಿತೀಯ ಸ್ಥಾನಿಯಾಯಿತು.ಮಹಿಳೆಯರ ವಿಭಾಗದ ಲೀಗ್ ಹಂತದ ಮತ್ತೊಂದು ಪಂದ್ಯದಲ್ಲಿ ಕನ್ಯಾಕುಮಾರಿ ತಮಿಳುನಾಡು ತಂಡ ಪಾಂಡಿಚೇರಿ ತಂಡವನ್ನು 19-13 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿತು. ಲೀಗ್ ಹಂತದಲ್ಲಿ ಒಂದು ಜಯ ದಾಖಲಿಸಿದ ತಮಿಳುನಾಡು ತಂಡ ತೃತೀಯ ಸ್ಥಾನ ಪಡೆದುಕೊಂಡರೆ, ಪಾಂಡಿಚೇರಿ ಚತುರ್ಥ ಸ್ಥಾನ ಪಡೆದುಕೊಂಡಿತು. ಬೆಸ್ಟ್ ರೈಡರ್ ಆಗಿ ನ್ಯಾಷನಲ್ಸ್ ಬೆಂಗಳೂರು ತಂಡದ ಶ್ರೀಲಕ್ಷ್ಮಿ , ಬೆಸ್ಟ್ ಡಿಫೆಂಡರ್ ಆಗಿ ನ್ಯಾಷನಲ್ಸ್ ಬೆಂಗಳೂರಿನ ವೃಂದಾ, ಬೆಸ್ಟ್ ಆಲ್ ರೌಂಡರ್ ಅಗಿ ಟಿಎಂಸಿ ಥಾಣೆಯ ಮಾಧುರಿ ಆಯ್ಕೆಯಾಗಿದ್ದಾರೆ.