ನವೋದಯ, ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಚ್ಚಳಕ್ಕೆ ಕ್ರಮ: ಶಿಕ್ಷಣ ಸಚಿವ ಮಧು ಬಂಗಾರಪ್ಪ
"ಸರಕಾರ ಕುಮಾರಸ್ವಾಮಿ ಕೈಯ್ಯಲ್ಲಿರುವುದಲ್ಲ"
ಮಂಗಳೂರು, ಜು. 22: ಸರಕಾರಿ ಶಾಲೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ನವೋದಯ ಶಾಲೆಗಳ ಹೆಚ್ಚಳಕ್ಕೆ ಮುಂದಿನ ವರ್ಷದಿಂದ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ ಹಾಗೂ ನವೋದಯ ಶಾಲೆಗಳನ್ನು ಹೆಚ್ಚಿಸಲು ದೊಡ್ಡ ಮಟ್ಟದ ಅನುದಾನ ಬೇಕಾಗಿದೆ. ಹಾಗಾಗಿ ಮುಂದಿನ ವರ್ಷದಿಂದ ಸೂಕ್ತ ಗುರಿಯೊಂದಿಗೆ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ರಾಜ್ಯಾದ್ಯಂತ ಸರಕಾರಿ ಶಾಲೆಗಳ ಶಿಕ್ಷಕರ ಕೊರತೆ ನೀಗಿಸಲು ದಾಖಲೆ ರೀತಿಯಲ್ಲಿ 25000 ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿ ಕೌನ್ಸೆಲಿಂಗ್ ಅಲ್ಪಾವಧಿಯಲ್ಲಿಯೇ ಪ್ರಕ್ರಿಯೆ ನಡೆದಿದೆ. ಜು. 31ರೊಳಗೆ ಈ ಪ್ರಕ್ರಿಯೆಗಳು ಅಂತ್ಯಗೊಳ್ಳಲಿವೆ. ವರ್ಗಾವಣೆಯಿಂದ ಕೆಲವೊಂದು ಕಡೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಮಸ್ಯೆ ಎದುರಾಗಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಿರುವ ನಿಟ್ಟಿನಲ್ಲಿ ವರ್ಗಾಯಿತ ಶಿಕ್ಷಕರು ನಿಗದಿತ ಶಾಲೆಗಳಿಗೆ ತಲುಪುವವರೆಗೆ ತಾತ್ಕಾಲಿಕವಾಗಿ ಹೆಚ್ಚುವರಿ ಶಿಕ್ಷಕರ ನೇಮಕಕ್ಕೆ ಡಿಡಿಪಿಐ ಹಾಗೂ ಬಿಇಒಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿಯವರಿಗೆ ಕಾಮನ್‌ಸೆನ್ಸ್ ಇಲ್ಲ
ಈ ಬಾರಿಯ ರಾಜ್ಯದ ವಿಧಾನಸಭೆಯ ಚುನಾವಣೆ ಸ್ವಷ್ಟವಾದ ಸಂದೇಶ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವನಾತ್ಮಕ ನಾಟಕಕ್ಕೆ ರಾಜ್ಯದ ಜನ ಬುದ್ಧಿ ಕಲಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ ಗ್ಯಾರಂಟಿಗಳ ವಿಚಾರದಲ್ಲಿ ವಿರೋಧ ಪಕ್ಷ ಮಾತನಾಡುವುದನ್ನು ನೋಡಿದಾಗ ಅವರಿಗೆ ಕಾಮನ್‌ಸೆನ್ಸ್ ಇಲ್ಲ ಎನ್ನುವುದು ಸ್ವಷ್ಟವಾಗುತ್ತದೆ. ಪ್ರತಿಯೊಂದಕ್ಕೂ ಕಾಲ ಕೊಡಬೇಕಾಗುತ್ತದೆ. ಸರಕಾರ ಬಂದು ಬರೀ 60 ದಿನಗಳು ಆಗಿದೆ. ಅದರೊಳಗೆ ನಮ್ಮ ಬಹುತೇಕ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಗ್ಯಾರಂಟಿಗಳನ್ನು ಹಂತಹಂತವಾಗಿ ಮಾಡಬೇಕಾಗುತ್ತದೆ ಎಂದರು.
ವಿರೋಧ ಪಕ್ಷದವರ ಹೊಲಸು ಮನಸ್ಥಿತಿ ಉಳ್ಳವರು. ನಮ್ಮವರು ಬಡವರ, ಮಹಿಳೆಯರ, ಯುವಜನತೆಯ ಮೇಲೆ ಕಾಳಜಿ ಇಟ್ಟುಕೊಂಡು ಇಂತಹ ಯೋಜನೆಗಳನ್ನು ತಂದಿದ್ದೇವೆ ಮಾತ್ರವಲ್ಲ ಅದನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.
ಬಿಜೆಪಿ ಸರಕಾರ ಜಿಎಸ್‌ಟಿ ಹಾಕುವ ಮೂಲಕ ಎಲ್ಲಕ್ಕೂ ಬೆಲೆ ಏರಿಸುವ ಕಾರ್ಯವನ್ನು ಮಾಡಿದೆ. ದೇಹದಲ್ಲಿ ಹೇಗೆ ಬ್ಲಡ್ ಅಗತ್ಯವೋ ಅದೇ ರೀತಿಯಲ್ಲಿ ಜೀವನ ನಡೆಸಲು ದುಡ್ಡು ಅಗತ್ಯವಿದೆ. ಇದೇ ಕಾರಣದಿಂದ ನಮ್ಮ ಸರಕಾರ ಬಡವರಿಗೆ ದುಡ್ಡು ಕೊಡುವ ಗೃಹಲಕ್ಷ್ಮಿಯನ್ನು ಜಾರಿಗೊಳಿಸಿದೆ. ಬಡವರಿಗೆ ದುಡ್ಡು ಸಿಕ್ಕಾಗ ಅದು ಮತ್ತೆ ಸಮಾಜಕ್ಕೆ ಸೇರುತ್ತದೆ. ಆದರೆ ಶ್ರೀಮಂತರಿಗೆ ಬಂದರೆ ಅದು ಬರೀ ಅವರಲ್ಲಿಯೇ ಉಳಿದುಬಿಡುತ್ತದೆ ಎಂದರು.
ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಬಿಲ್ಲವ ನಾಯಕರೂ ಆಗಿರುವ ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಿದ್ದಾರೆನ್ನಲಾದ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಆ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಹಾಗಿದ್ದರೂ ಅವರು ಪಕ್ಷದ ಹಿರಿಯ ನಾಯಕರು, ಅದಕ್ಕೆ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ. ಅದು ಪಕ್ಷದ ಆಂತರಿಕ ವಿಷಯ ಕೂಡಾ ಎಂದರು.
ಸರಕಾರ ಕುಮಾರಸ್ವಾಮಿ ಕೈಯ್ಯಲ್ಲಿರುವುದಲ್ಲ
ಜೆಡಿಎಸ್ ವರಿಷ್ಟರಾದ ಕುಮಾರಸ್ವಾಮಿಯವರು ಕಾಂಗ್ರೆಸ್ ವಿರುದ್ಧ ನಡೆಸುತ್ತಿರುವ ಆರೋಪಗಳ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಮಾತನಾಡಿದ ತಕ್ಷಣ ಸರಕಾರ ಏನು ಬಿದ್ದು ಹೋಗದು. ಸರಕಾರ ಅವರ ಕೈಯ್ಯಲಿಲ್ಲ. ಸರಕಾರ ಜನರ ಕೈಯಲ್ಲಿ ಇರುವುದು. ಸರಕಾರ ಈಗಾಗಲೇ ತೀರ್ಮಾನ ಮಾಡಿದೆ ಎಂದರು.
ಗೋಷ್ಟಿಯಲ್ಲಿ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶುಭೋದಯ ಆಳ್ವ, ನೀರಜ್‌ಪಾಲ್, ಸಲೀಂ, ಸುಹಾನ್ ಆಳ್ವ ಉಪಸ್ಥಿತರಿದ್ದರು.