ಮೂಡುಬಿದಿರೆ: ಸರ್ವಧರ್ಮ ಅರಿವು ಕಾರ್ಯಕ್ರಮ
ಮೂಡುಬಿದಿರೆ, ಅ.9: ಇಸ್ಲಾಂ ಧರ್ಮ ಬೋಧಿಸಿರುವ ಪರಧರ್ಮ ಸಹಿಷ್ಣುತೆ, ಸಾರ್ವತ್ರಿಕ ಭ್ರಾತಗೃತ್ವ, ಸಮಾನತೆಯ ಸಂದೇಶಗಳು ಜಗತ್ತಿಗೆ ಮಾದರಿಯಾಗಿದೆ. ಮದ್ಯಪಾನ, ಜೂಜು, ಸ್ತ್ರೀ ಶೋಷಣೆ, ಅಸ್ಪಶ್ಯತೆ, ಬಡ್ಡಿ ವ್ಯವಹಾರಗಳು ಇಸ್ಲಾಮಿನಲ್ಲಿ ನಿಷೇಧಿಸಲ್ಪಟ್ಟಿರುವುದನ್ನು ಜನಮಾನಸಕ್ಕೆ ಮನದಟ್ಟು ಮಾಡಿಕೊಟ್ಟ ಪ್ರವಾದಿ ಮಹಮ್ಮದ್ ಪೈಗಂಬರ್ ಇತಿಹಾಸದಲ್ಲಿ ಶ್ರೇಷ್ಠ ಸ್ಥಾನ ಮಾನವನ್ನು ಪಡೆದಿದ್ದಾರೆ. ಇಂದಿಗೂ ಅವರ ವ್ಯಕ್ತಿತ್ವವು ಸಮಾಜಮುಖಿಯಾಗಿದೆ ಎಂದು ಅಖಿಲ ಭಾರತ ಬ್ಯಾರಿ ಪರಿಷತ್ ಕೇಂದ್ರೀಯ ಸಮಿತಿ ಅಧ್ಯಕ್ಷ ಯು. ಎಚ್. ಖಾಲಿದ್ ಉಜಿರೆ ಹೇಳಿದರು.
ಮೂಡುಬಿದಿರೆಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ಸರ್ವ ಧರ್ಮ ಅರಿವು ಕಾರ್ಯಕ್ರಮದಲ್ಲಿ ಅವರು ಇಸ್ಲಾಂ ಧರ್ಮದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮವನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮಿ ಉದ್ಘಾಟಿಸಿದರು. ಕ್ರೈಸ್ತ ಧರ್ಮದ ಪರವಾಗಿ ಉಡುಪಿ ಧರ್ಮಪ್ರಾಂತದ ರೆ.ಫಾ. ವಿನ್ಸೆಂಟ್ ಕ್ರಾಸ್ತ ಹಾಗೂ ಹಿಂದೂ ಧರ್ಮದ ಪರವಾಗಿ ಯಕ್ಷಗಾನ ಕಲಾವಿದ ಅಶೋಕ್ ಭಟ್ ಉಪನ್ಯಾಸ ನೀಡಿದರು.
ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆ ಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು.