ದ.ಕ.ಜಿಲ್ಲಾ ಕಾರಾಗೃಹದಲ್ಲಿ ನರ್ಸರಿ ವ್ಯವಸ್ಥೆ: ಡಿಸಿ ಮುಲ್ಲೈ ಮಗಿಲನ್
ಮಂಗಳೂರು: ದ.ಕ. ಜಿಲ್ಲಾ ಕಾರಾಗೃಹದಲ್ಲಿ ಸಸಿಗಳನ್ನು ಬೆಳಸಿ, ಮಾರಾಟ ಮಾಡಲು ಅನುಕೂಲವಾಗುವಂತೆ ನರ್ಸರಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಬುಧವಾರ ಜಿಲ್ಲಾ ಕಾರಾ ಗೃಹದಲ್ಲಿ ಆಯೋಜಿಸಲಾಗಿದ್ದ ಬಂಧಿನಿವಾಸಿಗಳ ‘ಮನಪರಿವರ್ತನೆಗಾಗಿ ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೈಲಿನಲ್ಲಿ ಖೈದಿಗಳೇ ವಿವಿಧ ರೀತಿಯ ಗಿಡ ಮರಗಳನ್ನು ಬೆಳೆಸಿ ಪೋಷಿಸಿಕೊಂಡು ಬಂದಿರುವುದು ಶ್ಲಾಘನೀಯ. ಸಾಕಷ್ಟು ತರಕಾರಿ, ಹಣ್ಣುಗಿಡ ಮರಗಳು ಕಂಡುಬಂದಿವೆ. ಹಾಗಾಗಿ ನರ್ಸರಿ ಸ್ಥಾಪಿಸಿ, ಮರ ಗಿಡಗಳ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು. ಅದಕ್ಕಾಗಿ ಸೂಕ್ತ ಸ್ಥಳಾವಕಾಶ ನೀಡಲು ಮಹಾನಗರಪಾಲಿಕೆಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಟಿ. ಓಬಳೇಶಪ್ಪ, ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ, ಪತ್ರಕರ್ತ ಹರ್ಷ, ಕಾರಾಗೃಹ ಭದ್ರತಾ ಅಧಿಕಾರಿ ಗಳಾದ ಭರತ್ ನಾಯಕ್, ಸುಭಾಷ್ ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.