ಹರೇಕಳ: ಟಿಪ್ಪು ಸುಲ್ತಾನ್ ಕಟೌಟ್ ತೆರವಿಗೆ ಪೊಲೀಸ್ ಇಲಾಖೆ ನೋಟಿಸ್
ಕರ್ನಾಟಕ ರಾಜ್ಯ ಡಿವೈಎಫ್ಐ ಸಮ್ಮೇಳನ ಪ್ರಚಾರಾರ್ಥ
ಮಂಗಳೂರು: ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ನಡೆಯುವ ಡಿವೈಎಫ್ಐ ರಾಜ್ಯ ಸಮ್ಮೇಳನದ ಪ್ರಯುಕ್ತ ಹರೇಕಳ ದಲ್ಲಿ ಅಳವಡಿಸಲಾದ ಟಿಪ್ಪು ಸುಲ್ತಾನ್ ಕಟೌಟ್ ತೆರವುಗೊಳಿಸಬೇಕು ಎಂದು ಕೊಣಾಜೆ ಪೊಲೀಸ್ ಇನ್ಸ್ಟೆಕ್ಟರ್ ನೋಟಿಸ್ ನೀಡಿದ್ದಾರೆ.
ಕಾರ್ಡ್ಬೋರ್ಡ್ನಿಂದ ನಿರ್ಮಿಸಲಾದ 6 ಅಡಿ ಉದ್ದದ ಈ ಕಟೌಟನ್ನು ಅನುಮತಿಯಿಲ್ಲದೆ ಅಳವಡಿಸಲಾಗಿದೆ. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ಕಟೌಟ್ ತೆರವುಗೊಳಿಸಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ‘ನಾಡಿನ ಆದರ್ಶ ಪುರುಷರ, ಸ್ವಾತಂತ್ರ್ಯ ಸೇನಾನಿಗಳ, ಸಮಾಜ ಸುಧಾರಕರ ಪ್ರತಿಮೆ, ಫ್ಲೆಕ್ಸ್ ಹಾಕಲಾಗಿದೆ. ಹರೇಕಳ ಕಚೇರಿ ಬಳಿ ಕಾರ್ಯಕರ್ತರು ಹಾಕಿರುವ ಟಿಪ್ಪುಸುಲ್ತಾನ್ ಕಟೌಟ್ನ್ನು ತೆರವುಗೊಳಿಸಲು ಪೊಲೀಸರು ಸೂಚನೆ ನೀಡಿರುವುದು ಎಷ್ಟು ಸರಿ? ಟಿಪ್ಪು ಸುಲ್ತಾನ್ ಕಟೌಟ್, ಬ್ಯಾನರ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸದಂತೆ ಸರಕಾರ ನಿಷೇಧ ಹಾಕಿದೆಯೇ? ಯಾವ ಸರಕಾರ ನಿಷೇಧ ಹೇರಿದ್ದು ? ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರಕಾರ ಇರುವುದಲ್ಲವೇ? ದ.ಕ.ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಬಿಜೆಪಿ ಸರಕಾರ ಇದೆಯೇ ?’ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರಕಾರದ ಅವಧಿಯಲ್ಲೂ ಸಂಘಿ ಮನಸ್ಥಿತಿಯ ಪೋಲೀಸರು ಕೆಲಸ ಮಾಡುತ್ತಿರುವುದಕ್ಕೆ ಇದು ಸಾಕ್ಷಿ ಯಾಗಿದೆ. ಟಿಪ್ಪು ಕಟೌಟ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಟಿಪ್ಪುಸುಲ್ತಾನ್, ರಾಣಿ ಅಬ್ಬಕ್ಕ, ಕೋಟಿಚೆನ್ನಯರ ಪ್ರತಿಮೆ, ಕಟೌಟ್ ಸಹಿತ ಎಲ್ಲಾ ಆದರ್ಶರ, ಮಹಾತ್ಮರ ಪ್ರತಿಮೆ, ಬ್ಯಾನರ್ಗಳಿಗೆ ಡಿವೈಎಫ್ಐ ಕಾರ್ಯಕರ್ತರು ಕಾವಲು ನಿಲ್ಲಲಿ ದ್ದಾರೆ ಎಂದು ಬಿ.ಕೆ. ಇಮ್ತಿಯಾಝ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.