ಕಾಂಗ್ರೆಸ್ ಸರಕಾರದಿಂದ ಕರ್ನಾಟಕದಲ್ಲಿ ಮಹಿಳೆಯರಿಗೆ ಸ್ವಾಭಿಮಾನ, ಸ್ವಾವಲಂಬಿ ಬದುಕು: ಸಚಿವ ಕೃಷ್ಣ ಬೈರೇಗೌಡ
ಮಹಿಳೆಗೆ ತಿಂಗಳಿಗೆ 2 ಸಾವಿರ ರೂ. ನೀಡುತ್ತಿರುವುದು ದೊಡ್ಡ ಮಟ್ಟಿನ ಕೊಡುಗೆ, ಕಷ್ಟದಲ್ಲಿದ್ದ ಕುಟುಂಬಕ್ಕೆ ತುಂಬಾ ಸಹಕಾರ ಆಗಿದೆ: ಯುಟಿ ಖಾದರ್

ಮಂಗಳೂರು: ರಾಜ್ಯದಲ್ಲಿ ಮಹಿಳೆಯರಿಗೆ ಸ್ವಾವಲಂಬಿ, ಸ್ವಾಭಿಮಾನವಾಗಿ ಬದುಕುವ ಶಕ್ತಿಯನ್ನು ಕಾಂಗ್ರೆಸ್ ನೇತೃತ್ವದ ಸರಕಾರ ನೀಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಅವರು ತೊಕ್ಕೊಟ್ಟು ಯುನಿಟಿ ಹಾಲ್ ನಲ್ಲಿ ನಡೆದ ಉಳ್ಳಾಲ ತಾಲೂಕು ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಒಟ್ಟಿನಲ್ಲಿ ನೆಮ್ಮದಿಯಿಂದ ಬದುಕು ಇರಬೇಕು. ಈ ಕಾರಣದಿಂದ ಗೃಹಿಣಿಯರಿಗೆ ಮಾಸಿಕ 2000 ರೂ. ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಶಕ್ತಿ ಯೋಜನೆಯಡಿ 4.80ಕೋಟಿ ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಪ್ರವಾಸ, ತವರು ಮನೆ, ಮಗಳ ಮನೆಗೆ ಹೋಗಲು ಮಹಿಳೆಯರು ಯಾರನ್ನು ಕಾಯಬೇಕಾಗಿಲ್ಲ. ಸ್ವತಂತ್ರವಾಗಿ ಓಡಾಡಬಹುದು. ಮಹಿಳೆಯರಿಗೆ ಆತ್ಮವಿಶ್ವಾಸ ಜೊತೆಗೆ ಸ್ವಾತಂತ್ರ ಇರಬೇಕು ಎಂದ ಅವರು, ಮನೆಯ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಗೃಹ ಜ್ಯೋತಿ ಯೋಜನೆ ನೀಡಿದೆವು. 4.50 ಕೋಟಿ ಕನ್ನಡಿಗರಿಗೆ ಈ ಗ್ಯಾರಂಟಿ ಕೈ ಸೇರಿದೆ. ಇದನ್ನು ಪರಿಶೀಲನೆ ಮಾಡುವ ಜವಾಬ್ದಾರಿ ನಮಗೂ ಇದೆ. ಇದಕ್ಕಾಗಿ ನಾವು ಇಂತಹಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಪಲಾನುಭವಿಗಳಿಗೆ ಸಹಾಯ ಆಗಿದ್ದರೆ ಮಾತ್ರ ನಮ್ಮ ಯೋಜನೆ ಸಾರ್ಥಕ ಆಗುತ್ತದೆ. ಇದು ಸಾರ್ಥಕ ಸಮಾವೇಶ, ಗ್ಯಾರಂಟಿ ಉತ್ಸವ ಅಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಪೀಕರ್ ಯುಟಿ ಖಾದರ್ ಅವರು, ಕ್ಷೇತ್ರದ ಅಭಿವೃದ್ಧಿ ನಮ್ಮ ಗುರಿ. ಗ್ಯಾರಂಟಿ ಯೋಜನೆ ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆ ಆಗಿತ್ತು. ಈ ಪ್ರಣಾಳಿಕೆ ಬಗ್ಗೆ ಮತದಾರರು ಅನುಮಾನದಿಂದ ನೋಡಲಾರಂಭಿಸಿದರು. ಈ ಗ್ಯಾರಂಟಿ ಯೋಜನೆ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಲ್ಲಿ ಜಾರಿ ಆಗದಿದ್ದಲ್ಲಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಕೂಡ ಹಾಕಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರೆ ತಿಂಗಳಲ್ಲಿ ಯೋಜನೆ ಜನರ ಕಾಲ ಬುಡಕ್ಕೆ ತಲುಪಿಸುವಲ್ಲಿ ಯಶಸ್ವಿ ಆಗಿದೆ ಎಂದು ಹೇಳಿದರು.
ತಿಂಗಳಿಗೆ ಗೃಹಿಣಿಗೆ ಎರಡು ಸಾವಿರ ನೀಡುತ್ತಿರುವುದು ದೊಡ್ಡ ಮಟ್ಟಿನ ಕೊಡುಗೆ. ಕಷ್ಟದಲ್ಲಿದ್ದ ಕುಟುಂಬಕ್ಕೆ ತುಂಬಾ ಸಹಕಾರ ಆಗಿದೆ.
ಕಾಂಗ್ರೆಸ್ ಸರ್ಕಾರ ಏಳು ಕೆಜಿ ಅಕ್ಕಿ ಬಿಪಿಎಲ್ ಪಡಿತರರಿಗೆ ನೀಡುತ್ತಿತ್ತು. ಇದನ್ನು ಬಿಜೆಪಿ ಸರ್ಕಾರ ಐದಕ್ಕೆ ಇಳಿಕೆ ಮಾಡಿರುವುದು ಬಡವರಿಗೆ ಮಾಡಿರುವ ಅನ್ಯಾಯ. ಇದನ್ನೆಲ್ಲ ನಾವು ಸರಿದೂಗಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ಕೆಲವು ತಿಂಗಳ ಹಿಂದೆ ನಗರಸಭೆ ಕಸವಿಲೇವಾರಿ ಮಾಡುವ ವಾಹನದ ಬಾಗಿಲು ತೆಗೆಯಲು ಪೌರ ಕಾರ್ಮಿಕರಿಗೆ ಸಾಧ್ಯ ಆಗಾದಾಗ ಕಿಟಕಿ ಮೂಲಕ ಇಳಿದು ತನ್ನ ಜವಾಬ್ದಾರಿಯನ್ನು ನೆರವೇರಿಸಿದ್ದರು. ಅವರ ಈ ಜವಾಬ್ದಾರಿಯುತ ಕೆಲಸ ಅವರು ಮಾಡಿದ್ದಾರೆ. ಇದನ್ನು ಕೆಲವರು ವಿಡಿಯೋ ಮಾಡಿ ಟ್ರೊಲ್ ಮಾಡುವ ಮೂಲಕ ನಮಗೆ ಪ್ರೇರಣೆ ನೀಡಿದ್ದಾರೆ ಇದರಿಂದ ನಮಗೆ ಆರು ಕಸದ ವಾಹನ ಖರೀದಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲು ತೀರ್ಮಾನ ತೆಗೆದುಕೊಂಡಿದ್ದು ಗ್ಯಾರಂಟಿ ಯೋಜನೆ ಬಗ್ಗೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಕ್ಯಾಬಿನೆಟ್ ಮೀಟಿಂಗ್ ಕರೆದು ವಿಚಾರ ಮಂಡಿಸಿದ್ದರು. ಇದನ್ನು ಹೇಗೆ ಮಾಡಬಹುದು, ಎಷ್ಟು ಅನುದಾನ ಬೇಕು ಎಂಬ ಬಗ್ಗೆ ಲೆಕ್ಕಾಚಾರ ಮಾಡಿ ಹಂತಹಂತವಾಗಿ ಜಾರಿ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯಕ್ಕೆ ಬರಗಾಲ ಬಂದಾಗ ಕೇಂದ್ರ ಹಣ ನೀಡಬೇಕು. ಆದರೂ ನೀಡಲಿಲ್ಲ. ನಾವು 6.80 ಕೋಟಿ ಹಣ ಬರಗಾಲದಿಂದ ನಷ್ಟ ಅನುಭವಿಸಿದ ರೈತರ ಕುಟುಂಬಗಳಿಗೆ ನೀಡಿದ್ದೇವೆ. ನಮಗೆ ತೊಂದರೆ ಆದಲ್ಲಿ ಕಾನೂನು ಪ್ರಕಾರ ಕೇಂದ್ರ ಸಹಾಯ ಮಾಡಬೇಕು. ಅದಕ್ಕೆ ಮಾನದಂಡ ಕೂಡ ಇದೆ. ಈ ಬಗ್ಗೆ ಬಿಜೆಪಿಯ ರಾಜ್ಯದ ಎಂಪಿಗಳು ಯಾಕೆ ಮೌನ ಆಗಿದ್ದಾರೆ ಎಂದು ಪ್ರಶ್ನಿಸಿದ ಅವರು ಕನಿಷ್ಠ ನಾವು ಕೊಟ್ಟ ಮೊತ್ತದಷ್ಟಾದರೂ ನೀವು ಕೊಡಬೇಕು. ಆದರೂ ಕೊಡಲಿಲ್ಲ. ಈ ಬಗ್ಗೆ ಸಭೆ ಕೂಡ ಕರೆದಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯಿಂದ ಆಗಿರುವ ಸಹಕಾರದ ಬಗ್ಗೆ ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಎಂ ಎಲ್ ಸಿ ಮಂಜುನಾಥ್ ಭಂಡಾರಿ, ಮಾಜಿ ಶಾಸಕ ಶಕುಂತಲಾ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಬಿ.ಎಂ.ಫಾರೂಕ್, ಜಿಲ್ಲಾಧಿಕಾರಿ ಮುಲ್ಲೈಮುಗಿಲನ್, ತಹಶೀಲ್ದಾರ್, ಪುಟ್ಟ ರಾಜು, ಪೌರಾಯುಕ್ತ ವಾಣಿ ಆಳ್ವ ಸಿಡಿಪಿಒ ಶೈಲಾ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಮತಾ ಗಟ್ಟಿ, ಜಿಪಂ ಸಿಇಒ ಆನಂದ, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಸಹಾಯಕ ಆಯುಕ್ತ ಹರ್ಷವರ್ಧನ್ ಸ್ವಾಗತಿಸಿದರು. ಮುಹಮ್ಮದ್ ಅಲಿ ಕಮರಡಿ ಕಾರ್ಯಕ್ರಮ ನಿರೂಪಿಸಿದರು. ವಾಣಿ ಆಳ್ವ ವಂದಿಸಿದರು.