ಪಂಜಿಮೊಗರು | ಸರ್ಕಾರಿ ಶಾಲೆ ಆವರಣ ಗೋಡೆ ಕಾಮಗಾರಿಗೆ ತಡೆ; ಮಾಜಿ ಕಾರ್ಪೊರೇಟರ್ ರಾಜಕೀಯ ಪಿತೂರಿ ಕಾರಣ: ಅನಿಲ್ ಕುಮಾರ್

ಕಾವೂರು: ದ.ಕ.ಜಿ.ಪಂ ಶಾಲೆ ಪಂಜಿಮೊಗರು ಇದರ ಆವರಣ ಗೋಡೆ ನಿರ್ಮಾಣದಲ್ಲಿ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಹಾಗೂ ಮಾಜಿ ಮ.ನ.ಪಾ ಸದಸ್ಯರೊಬ್ಬರು ರಾಜಕೀಯ ಪಿತೂರಿ ನಡೆಸಿದ ಪರಿಣಾಮ ವಿಳಂಬವಾಗುತ್ತಿದೆ ಎಂದು ಸ್ಥಳೀಯ ಕಾರ್ಪೊರೇಟರ್ ಹಾಗೂ ಪ್ರಸ್ತುತ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದ್ದಾರೆ.
ಶಾಲೆಯ ಆವರಣಗೋಡೆ ತೀರ ಶಿಥಿಲಗೊಂಡಿದ್ದು, ಪಿಡಬ್ಲ್ಯು ಡಿ ಪ್ಯಾಕೇಜ್ ಮೂಲಕ ಅನುದಾನ ಮಂಜೂರಾಗಿದೆ. ಶಾಲೆಯ ಆವರಣಗೋಡೆಗೆ ತಾಗಿಕೊಂಡಂತೆ ರಸ್ತೆಯೊಂದಿದೆ. ಈ ರಸ್ತೆಯಿಂದಾಗಿ ಸಾರ್ವಜನಿಕರಿಗೆ ಅನಾನುಕೂಲತೆಗಳಾಗುತ್ತಿರುವ ಕುರಿತು ಸಾರ್ವಜನಿಕರಿಂದ ಹಲವಾರು ದೂರು ಗಳು ಬಂದಿದ್ದವು. ಸಾರ್ವಜನಿಕ ಹಿತದೃಷ್ಟಿಯಿಂದ ರಸ್ತೆಯನ್ನು ಅಗಲೀಕರಣ ಮಾಡುವಂತೆ ಈ ಭಾಗದ ಸ್ಥಳೀಯರು, ಸಂಘ ಸಂಸ್ಥೆಗಳು ಮನಪಾ ಸದಸ್ಯರು, ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಲೆಯ ಆವರಣಗೋಡೆ ನಿರ್ಮಾಣದ ಸಂದರ್ಭ ಶಾಲೆಯ ವಿದ್ಯಾರ್ಥಿಗಳಿಗೂ ಸಮಸ್ಯೆಗಳಾಗಬಾರದು ಮತ್ತು ಶಾಲೆಯಿಂದಾಗಿ ಸ್ಥಳೀಯರಿಗೂ ಸಮಸ್ಯೆಗಳಾಗಬಾರದೆಂದು ನಿರ್ಣಯಿಸಿ ಶಾಲೆಯ ಆವರಣಗೋಡೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು.
ಆದರೆ, ಇದೇ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಮ.ನ.ಪಾ. ಮಾಜಿ ಸದಸ್ಯರ ರಾಜಕೀಯ ಪಿತೂರಿ ನಡೆಸಿ ತಡೆಗೋಡೆ ನಿರ್ಮಾಣಕ್ಕೆತಡೆಯೊಡ್ಡಿದ್ದಾರೆ ಎಂದು ಪ್ರಸ್ತುತ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಪೊರೇಟರ್ ಅನಿಲ್ ಕುಮಾರ್ ಪತ್ರಿಕಾ ಪ್ರಕಟನೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.