ದ.ಕ. | ವಿಶೇಷ ಚೇತನರಿಗೆ ಮತದಾನಕ್ಕೆ ಪ್ರೇರಣೆ: ಸ್ವೀಪ್ ನಿಂದ ವಿನೂತನ ಯೋಜನೆ
ಮಂಗಳೂರು, ಮಾ.31: ಲೋಕಸಭಾ ಚುನಾವಣೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ದ.ಕ. ಜಿಲ್ಲಾ ಸ್ವೀಪ್ ಸಮಿತಿಯು, ವಿಶೇಷ ಚೇತನರಿಗಾಗಿ ವಿನೂತನ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ದ.ಕ. ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮುಲ್ಕಿ ತಾಲೂಕು ಪಂಚಾಯತ್ ವತಿಯಿಂದ ಆಹ್ವಾನ ಪತ್ರಿಕೆಯೊಂದನ್ನು ತಯಾರಿಸಲಾಗಿದ್ದು, ಅದನ್ನು ವಿಶೇಷ ಚೇತನ ಮತದಾರರಿಗೆ ತಲುಪಿಸಲು ಮುಂದಾಗಿದೆ.
ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ದ.ಕ. ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಡಾ.ಆನಂದ್ ಈ ವಿಶೇಷ ಚೇತನರಿಗಾಗಿನ ಆಹ್ವಾನ ಪತ್ರಿಕೆ ಬಿಡುಗಡೆ ಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಶೇ.40ರಷ್ಟು ಅಂಗ ವೈಕಲ್ಯ ಹೊಂದಿರುವ ವಿಶೇಷ ಚೇತನ ಮತದಾರರಿಗೆ ಭಾರತ ಚುನಾವಣಾ ಆಯೋಗ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಿದೆ. ಪೋಸ್ಟಲ್ ಬ್ಯಾಲೆಟ್ (ಅಂಚೆ ಮತಪತ್ರ) ಅವಶಕ್ಯತೆ ಇರುವ ಮತದಾರರು ಸಂಬಂಧಿಸಿದ ಕಚೇರಿಗೆ ಸಂಪರ್ಕಿಸಿ ನಮೂನೆ 12 ಡಿ ಭರ್ತಿ ಮಾಡಿ ಅದರೊಂದಿಗೆ ತಮ್ಮ ಚುನಾವಣಾ ಗುರುತಿನ ಚೀಟಿ ಪ್ರತಿಯನ್ನು ಸಲ್ಲಿಸಬೇಕು ಎಂದರು.
ಮುಲ್ಕಿ ತಾಲೂಕು ಪಂಚಾಯತ್ನ ಇಒ ಹಾಗೂ ಮುಲ್ಕಿ ತಾಲೂಕು ಸ್ಪೀಪ್ ನೋಡಲ್ ಅಧಿಕಾರಿ ಗುರುದತ್ ಎಂ.ಎನ್., ಅತಿಕಾರಿಬೆಟ್ಟು ಗ್ರಾಪಂನ ಪಿಡಿಒ ಶೈಲಜಾ ಉಪಸ್ಥಿತರಿದ್ದರು.
ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ರ್ಯಾಂಪ್ ವ್ಯವಸ್ಥೆ ಸೇರಿದಂತೆ ಇತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಮುಲ್ಕಿ ತಾಪಂ ವ್ಯಾಪ್ತಿಯ 7 ಗ್ರಾಪಂ ಹಾಗೂ ಪಟ್ಟಣ ಪಂಚಾಯತ್ ಮತ್ತು ನಗರ ಪಂಚಾಯತ್ ವ್ಯಾಪ್ತಿಯಲ್ಲಿ 523 ವಿಶೇಷ ಚೇತನ ಮತದಾರರು ಪಟ್ಟಿಯಲ್ಲಿ ನೋಂದಾಯಿಸಿದ್ದಾರೆ. ಗ್ರಾಪಂ ಹಾಗೂ ಪಟ್ಟಣ, ನಗರ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮೂಲಕ ಎಲ್ಲಾ ವಿಶೇಷ ಚೇತನರಿಗೆ ವಿನೂತನ ಆಹ್ವಾನ ಪತ್ರಿಕೆಯನ್ನು ತಲುಪಿಸಲಾಗುತ್ತದೆ ಎಂದು ದ.ಕ. ಜಿಲ್ಲಾ ಸ್ವೀಪ್ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.