"ಡಿಜೆ ಹಳ್ಳಿ, ಕೆಜೆ ಹಳ್ಳಿ" ರೀತಿಯ ಸ್ಥಿತಿ ನಿರ್ಮಿಸುತ್ತೇನೆ ಎಂದ ಬಿಜೆಪಿ ಶಾಸಕ ಹರೀಶ್ ಪೂಂಜಾ| ಇದರ ಅರ್ಥ ಏನು ?: ಮುನೀರ್ ಕಾಟಿಪಳ್ಳ
► ಯುಎಪಿಎ ಕಾಯ್ದೆ ದಾಖಲಿಸಿ ತನಿಖೆ ನಡೆಸಲು ಅರ್ಹ ಪ್ರಕರಣ ಅಲ್ಲವೆ ? ► ಸರಕಾರ ಮೌನ ಮುರಿಯಬೇಕು

ಶಾಸಕ ಹರೀಶ್ ಪೂಂಜಾ
ಮಂಗಳೂರು: ಬಿಜೆಪಿ ಶಾಸಕ ಹರೀಶ್ ಪೂಂಜಾ ತನ್ನ ವಿವಾದಾತ್ಮಕ ಭಾಷಣದಲ್ಲಿ ದ.ಕ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಉದ್ದೇಶಿಸಿ "ಡಿಜೆ ಹಳ್ಳಿ ಕೆಜೆ ಹಳ್ಳಿ ರೀತಿಯ ಸ್ಥಿತಿ ನಿರ್ಮಿಸುತ್ತೇನೆ, ಎಚ್ಚರ ಇರಲಿ" ಎಂದು ಬೆದರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ. ಇದರ ಅರ್ಥ ಏನು ? ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ನಡೆದಾಗ (ಪೊಲೀಸ್ ಠಾಣೆಗೆ ಗುಂಪು ಬೆಂಕಿ ಹಾಕಿತ್ತು. ಪೊಲೀಸ್ ವಾಹನಗಳು ಸುಟ್ಟು ಭಸ್ಮ ಆಗಿತ್ತು. ಸ್ಥಳೀಯ ಶಾಸಕನ ಮನೆಯನ್ನೂ ಸುಟ್ಟು ಹಾಕಲಾಗಿತ್ತು) ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇತ್ತು. ಆಗ ಬಿಜೆಪಿ ಈ ಘಟನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ವಿಧಾನ ಸಭೆಯಲ್ಲಿ ಕೋಲಾಹಲ ನಡೆದಿತ್ತು. ಚುನಾವಣೆಯಲ್ಲೂ ಆ ಘಟನೆಯನ್ನು ಬಿಜೆಪಿ ಪ್ರಚಾರಕ್ಕೆ ಬಳಸಿತ್ತು. ಆ ಘಟನೆಯನ್ನು ದೇಶದ್ರೋಹ ಎಂದು ಪರಿಗಣಿಸಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈಗಲೂ ಆ ಪ್ರಕರಣದ ಆರೋಪಿತರು ಜಾಮೀನು ದೊರಕದೆ ಜೈಲಿನಲ್ಲಿದ್ದಾರೆ. ಅಂತಹ ಗಂಭೀರ ಪ್ರಕರಣ ಎಂದು ಬಿಜೆಪಿ ಪಕ್ಷ ಹಾಗೂ ಅಂದಿನ ಬಿಜೆಪಿ ಸರಕಾರ ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣವನ್ನು ಪರಿಗಣಿಸಿತ್ತು.
ಈಗ ಬಿಜೆಪಿ ಶಾಸಕ ಹರೀಶ್ ಪೂಂಜಾ, ಬೆಳ್ತಂಗಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಜೆ ಹಳ್ಳಿ, ಡಿಜೆ ಹಳ್ಳಿ ಘಟನೆಯನ್ನು ಪುನರಾವರ್ತಿಸುವುದಾಗಿ ಮೈಕಾ ಕಟ್ಟಿ ತಾಲೂಕು ಆಡಳಿತದ ಮುಂಭಾಗ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸಹಿತ ಹಲವು ಶಾಸಕರ ಸಮ್ಮುಖ ಪೊಲೀಸ್ ವರಿಷ್ಠಾಧಿಕಾರಿಯನ್ನು ಉದ್ದೇಶಿಸಿ ಬೆದರಿಕೆ ಹಾಕಿದ್ದಾರೆ. ಇದರ ಅರ್ಥ ಏನು? ಬಿಜೆಪಿ ಪಕ್ಷ ಈ ಬೆದರಿಕೆಯ ಕುರಿತು ಏನನ್ನುತ್ತದೆ ? ಸರಕಾರ ಯಾಕೆ ಮೌನ ವಹಿಸಿದೆ ? ಯುಎಪಿಎ ಅಡಿ ಮೊಕದ್ದಮೆ ದಾಖಲಾಗಿರುವ ಪ್ರಕರಣವನ್ನು ಪುನರಾವರ್ತಿಸುತ್ತೇನೆ ಎಂಬ ಬಹಿರಂಗ ಬೆದರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಡವೆ ? ಶಾಸಕರ ಬಹಿರಂಗ ಕರೆಯನ್ನು ಅವರ ಹಿಂಬಾಲಕರು ಜಾರಿ ಮಾಡಲು ಹೊರಟರೆ ಸ್ಥಿತಿ ಏನಾಗಬಹುದು ? ಶಾಸಕ ಪೂಂಜಾರ ಈ ಬೆದರಿಕೆ ಯುಎಪಿಎ ಕಾಯ್ದೆ ದಾಖಲಿಸಿ ತನಿಖೆ ನಡೆಸಲು ಅರ್ಹ ಪ್ರಕರಣ ಅಲ್ಲವೆ ? ಬೇರೆಯವರು ಈ ರೀತಿ ಭಾಷಣ/ಬೆದರಿಕೆ ಹಾಕಿದ್ದರೆ ಬಿಜೆಪಿ ಆಕಾಶ, ಭೂಮಿ ಒಂದು ಮಾಡುತ್ತಿರಲಿಲ್ಲವೆ ? ಸರಕಾರ ಮೌನ ಮುರಿಯಬೇಕು ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.