ಜೈನ ಧರ್ಮ ನಿಂದನೆ ಆರೋಪ: ತಿಮರೋಡಿ ವಿರುದ್ಧ ಕಠಿಣ ಕ್ರಮಕ್ಕೆ ಜೈನರ ಆಗ್ರಹ
ಮಂಗಳೂರು: ಜೈನ ಧರ್ಮದ ವಿರುದ್ಧ ನಿಂದನೀಯ ಶಬ್ದಗಳನ್ನು ಬಳಸಿ ಜೈನರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಮೂಲಕ ಸಮಾಜದ ಅಶಾಂತಿ ಹಾಗೂ ಭಯದ ವಾತಾವರಣ ಸೃಷ್ಟಿಸಲು ಮಹೇಶ್ ಶೆಟ್ಟಿ ಯತ್ನಿಸಿದ್ದಾರೆಂದು ಆರೋಪಿಸಿರುವ ದಕ್ಷಿಣ ಕನ್ನಡ ಜೈನ ಸಮುದಾಯದ ಮುಖಂಡರು ನಗರದ ಮಿನಿ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಸಿ, ಕ್ರಮಕ್ಕೆ ಆಗ್ರಹಿಸಿದರು.
ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಗಣೇಶೋತ್ಸವದ ಕಾರ್ಯಕ್ರಮದ ವೇದಿಕೆಯಲ್ಲಿ ಜೈನ ಧರ್ಮದ ಬಗ್ಗೆ ಕೊಳಕು ಭಾಷೆಯನ್ನು ಬಳಸಿ ನಿಂದನೆ ಮಾಡಿದ್ದು ಮಾತ್ರವಲ್ಲದೆ ಇನ್ನೊಂದು ಧರ್ಮದವರನ್ನು ಜೈನರ ವಿರುದ್ದ ಎತ್ತಿ ಕಟ್ಟುವ ಹೇಯ ಕಾರ್ಯ ಮಾಡಿರುವ ಮಹೇಶ್ ಶೆಟ್ಟಿ ಹಾಗೂ ಅವರ ಸಹಚರರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜೈನರು ಆಗ್ರಹಿಸಿ ದ.ಕ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಶಾಂತಿಯುತವಾಗಿ ಎಲ್ಲರೊಂದಿಗೂ ಸಹ ಬಾಳ್ವೆಯಲ್ಲಿರುವ ಇಲ್ಲಿನ ಜೈನರಲ್ಲಿ ಇವರಿಂದಾಗಿ ಉದ್ಭವಿಸಿರುವ ಭಯವನ್ನು ಹೋಗಲಾಡಿಸುವ ಕಾರ್ಯ ಶೀಘ್ರವಾಗಿ ಮಾಡಬೇಕು ಆಗ್ರಹಿಸಿದರು.
ಭಾರತೀಯ ಜೈನ್ ಮಿಲನ್ ಮಂಗಳೂರು ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಜೈನ ಮಿಲನ್ನ ಪದಾಧಿಕಾರಿಗಳು , ಧುರೀಣರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು‘ ಜೈನ ಸಮುದಾಯದ ವಿರುದ್ಧ ಅಪ ಪ್ರಚಾರ ಮಾಡಿರುವ ಮಹೇಶ್ ಶೆಟ್ಟಿ ವಿರುದ್ಧ ಕ್ರಮ ಕೈಗೊಂಡು, ಜೈನ ಧರ್ಮದ ಬಗ್ಗೆ ಅಪ್ರಚಾರ ಮಾಡುವವರ ವಿರುದ್ಧ ಕಡಿವಾಣ ಹಾಕುವಂತೆ ಸರಕಾರವನ್ನು ಆಗ್ರಹಿಸಿದರು.
ಮಂಗಳೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಮಾತನಾಡಿ ಜಗತ್ತಿನಲ್ಲೇ ಜೈನರು ಅಲ್ಪಸಂಖ್ಯಾತರಲ್ಲಿ ಅಲ್ಪ ಸಂಖ್ಯಾತರಾಗಿದ್ದಾರೆ. ಅನವಶ್ಯಕವಾಗಿ ಜೈನ ಸಮದಾಯದ ಭಾವನೆಗಳಿಗೆ ಮಹೇಶ್ ತಿಮರೋಡಿ ಧಕ್ಕೆಯನ್ನುಂಟು ಮಾಡಿದ್ದಾರೆ , ವರ್ಗ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಜೈನ ಸಮುದಾಯ ಮುಖಂಡರಾದ ಸುದರ್ಶನ ಜೈನ್ ಬಂಟ್ವಾಳ, ಶ್ವೇತಾ ಜೈನ್, ಬಾಹುಬಲಿ ಪ್ರಸಾದ್, ದಿಲೀಪ್ ಜೈನ್, ಪುಷ್ಪರಾಜ್ ಜೈನ್ , ನೇಮಿರಾಜ ಅರಿಗ, ಸುರೇಶ್ ಬಳ್ಳಾಲ್, ರತ್ನಾಕರ ಜೈನ್, ಹರ್ಷೇಂದ್ರ ಕುಮಾರ್ ಮಾಳ, ಜಗದೀಶ್ ಅಧಿಕಾರಿ , ಮಯೂರ ಕೀರ್ತಿ ಅವರು ಮಾತನಾಡಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಭಾರತೀಯ ಜೈನ ಮಿಲನ್ ಮಂಗಳೂರು ಶಾಖೆಯ ಅಧ್ಯಕ್ಷ ರತ್ನಾಕರ ಜೈನ್, ಕಾರ್ಯದರ್ಶಿ ವೈಶಾಲಿ ಪಡಿವಾಳ್, ಕೋಶಾಧಿಕಾರಿ ಪ್ರಿಯಾ ಸುದೇಶ್, ರಾಜೇಂದ್ರ ಶೆಟ್ಟಿ ಅರಳ, ಎಂ.ಆರ್ ಬಲ್ಲಾಳ್, ರಾಜವರ್ಮ ಬಲ್ಲಾಳ್, ಶೋಭಾಕಾರ್ ಬಲ್ಲಾಳ್, ಪ್ರಮೋದ್ ಕುಮಾರ್ ಉಜಿರೆ, ಡಾ. ನವೀನ್ ಜೈನ್ ಬೆಳ್ತಂಗಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಲಾಯಿತು. ಕುಲ್ದೀಪ್ ಜೈನ್, ದರ್ಶನ್ ಜೈನ್, ಜಿತೇಶ್ ಜೈನ್, ನೇಮಿರಾಜ್ ಜೈನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.