ಪೂರ್ವಜರ ಹೆಸರಿನ ಮುಂದೆ ʼಬ್ಯಾರಿʼ ಪದ ಬಳಕೆಯು ಗೌರವದ ಪ್ರತೀಕ : ಅಬ್ದುಲ್ಲಾ ಮಾದುಮೂಲೆ
ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದಿಂದ ಬ್ಯಾರಿ ಭಾಷಾ ದಿನಾಚರಣೆ
ಮಂಗಳೂರು: ಹಿಂದೆ ನಮ್ಮ ಪೂರ್ವಜರ ಹೆಸರಿನ ಮುಂದೆ ʼಬ್ಯಾರಿʼ ಎಂಬ ಪದವು ಗೌರವದ ಪ್ರತೀಕವಾಗಿತ್ತು. ಬಳಿಕದ ತಲೆಮಾರಿಗೆ ಬ್ಯಾರಿ ಎಂಬ ಪದದ ಬಗ್ಗೆ ಕೀಳರಿಮೆ ಉಂಟಾದರೂ ಹೊಸ ತಲೆಮಾರು ಸುದೀರ್ಘ ಆಂದೋಲನ ನಡೆಸಿದ್ದರಿಂದ ಬ್ಯಾರಿ ಎಂಬ ಪದವು ಮತ್ತೆ ಚಾಲ್ತಿಗೆ ಬರುವಂತಾಯಿತು. ಇದು ಬ್ಯಾರಿಗಳ ಪಾಲಿಗೆ ಹೆಮ್ಮೆ ಮತ್ತು ಅಭಿಮಾನಕ್ಕೆ ಕಾರಣವಾಯಿತು ಎಂದು ಉದ್ಯಮಿ ಅಬ್ದುಲ್ಲಾ ಮಾದುಮೂಲೆ ಹೇಳಿದರು.
ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ವತಿಯಿಂದ ನಗರದ ಫಿಝಾ ಬೈ ನೆಕ್ಸಸ್ ಮಾಲ್ನಲ್ಲಿ ಗುರುವಾರ ನಡೆದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವನ್ನು ದಫ್ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲದಕ್ಕೂ ತನ್ನದೇ ವಿಶೇಷ ಮತ್ತು ಹಿರಿಮೆ ಇದೆ. ಅದರಂತೆ ಬ್ಯಾರಿ ಭಾಷಾ ದಿನಾಚರಣೆಗೂ ತನ್ನದೇ ಆದ ಮಹತ್ವವಿದೆ. ಬದುಕಿನ ಜಂಜಾಟದ ಮಧ್ಯೆ ಮಾತೃಭಾಷೆಯನ್ನು ಉಳಿಸಿ ಬೆಳೆಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಸಮುದಾಯ ಸಬಲೀಕರಗೊಂಡರೆ ಮಾತ್ರ ಮಾತೃಭಾಷೆ ಮತ್ತು ಪಾರಂಪರಿಕ ಸಂಸ್ಕೃತಿಯನ್ನು ಉಳಿಸಲು ಮತ್ತು ಸಾಹಿತ್ಯ ವನ್ನು ಸೃಷ್ಟಿಸಲು ಸಾಧ್ಯ ಎಂದು ಅಬ್ದುಲ್ಲಾ ಮಾದುಮೂಲೆ ಅಭಿಪ್ರಾಯಪಟ್ಟರು.
ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಯು.ಎಚ್. ಖಾಲಿದ್ ಉಜಿರೆ, ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ನ ಅಧ್ಯಕ್ಷ ಹಾಜಿ ಎಂ.ಎಚ್. ಮೊಹಿದಿನ್, ಹಿದಾಯ ಫೌಂಡೇಶನ್ನ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು, ಅಖಿಲ ಭಾರತ ಬ್ಯಾರಿ ಪರಿಷತ್ನ ಗೌರವ ಸಲಹೆಗಾರ ಡಾ. ಸಿದ್ದೀಕ್ ಅಡ್ಡೂರು, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ದೀಪಕ್ರಾಜ್ ಉಳ್ಳಾಲ್, ಸಂಯುಕ್ತ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಉದ್ಯಮಿಗಳಾದ ಯು.ಬಿ. ಮುಹಮ್ಮದ್ ಮತ್ತು ಆಸೀಫ್ ಇಕ್ಬಾಲ್, ನಿರ್ದೇಶಕ ಇಸ್ಮಾಯೀಲ್ ಮೂಡುಶೆಡ್ಡೆ, ಗಾಯಕ ಮುಹಮ್ಮದ್ ಹನೀಫ್ ಉಪ್ಪಳ, ನಿವೃತ್ತ ಶಿಕ್ಷಕ ಮುಹಮ್ಮದ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು. ಸಮದ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
*ಜಿಲ್ಲೆಯ ಗಾಯಕರಿಂದ ಬ್ಯಾರಿ ಖವ್ವಾಲಿ, ಬ್ಯಾರಿ ಗೀತೆಗಳು, ಬ್ಯಾರಿ ಗಝಲ್, ಬ್ಯಾರಿ ಶಾಯರಿ, ಚುಟುಕು, ಒಗಟು, ಗಾದೆ, ನೀತಿ ಬೋಧಕ ಪ್ರಹಸನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.