ಸ್ನೇಹಾಲಯ ಡಿ-ಅಡಿಕ್ಷನ್ ಸೆಂಟರ್ ಉದ್ಘಾಟನೆ
ಮಂಜೇಶ್ವರ, ಅ.3: ಇಲ್ಲಿನ ಪಾವೂರು ಬಾಚಳಿಕೆಯ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಹೊಸ ಸೇವಾ ಸಂಸ್ಥೆಯಾದ ಸ್ನೇಹಾಲಯ ಡಿ-ಅಡಿಕ್ಷನ್ ಸೆಂಟರನ್ನು ಉದ್ಯಮಿ ಮೈಕಲ್ ಡಿಸೋಜ ಬುಧವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಹೆಚ್ಚುತ್ತಿರುವ ವ್ಯಸನದ ಸಮಸ್ಯೆಯನ್ನು ಪರಿಹರಿಸಲು ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ ಎಂದರು.
ಮಂಗಳೂರು ಬಿಷಪ್ ಅ.ವಂ.ಡಾ.ಪೀಟರ್ ಪೌಲ್ ಸಲ್ಡಾನ್ಹ ಪ್ರಾರ್ಥನೆಯ ನೇತೃತ್ವ ವಹಿಸಿ ನೂತನ ಕಟ್ಟಡಕ್ಕೆ ಆಶೀರ್ವ ಚನ ನೀಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಶಾಸಕ ಎ.ಕೆ.ಎಂ. ಅಶ್ರಫ್, ಪತ್ರಕರ್ತರಾದ ವಿಜಯಲಕ್ಷ್ಮಿ ಶಿಬರೂರು, ವಾಲ್ಟರ್ ನಂದಳಿಕೆ ಆತ್ಮದಾಸ್ ಯಾಮಿ, ಒಸಿಬಿ ಅಧ್ಯಕ್ಷ ಎನ್. ಅಲಿ ಅಬ್ದುಲ್ಲಾ, ಆರ್ಪನೇಜ್ ಕಂಟ್ರೋಲ್ ಬೋರ್ಡ್ನ ಸದಸ್ಯ ಕಾರ್ಯದರ್ಶಿ ಸಿನುಕುಮಾರ್ ಭಾಗವಹಿಸಿದ್ದರು.
ಸ್ನೇಹಾಲಯದ ಸಂಸ್ಥಾಪಕರ ಜೀವನ ಕುರಿತು ರವಿ ನಾಯ್ಕಪು ಬರೆದ ಱಸ್ನೇಹಗಂಗೆ ಎರಡನೇ ಆವೃತ್ತಿಯನ್ನು ಮತ್ತು ಸ್ನೇಹಾಲಯದ ವೆಬ್ಸೈಟನ್ನು ಹೊಸದಿಲ್ಲಿಯ ಸಹಾಯಕ ಬಿಷಪ್ ರೆ.ಡಾ.ದೀಪಕ್ ವಲೇರಿಯನ್ ತಾವ್ರೊ ಅನಾವರಣ ಗೊಳಿಸಿದರು.
ಸ್ನೇಹಾಲಯದ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ ಸ್ವಾಗತಿಸಿದರು. ಕಾರ್ಯದರ್ಶಿ ಒಲಿವಿಯಾ ಕ್ರಾಸ್ತಾ ವಂದಿಸಿದರು. ಜಿಯೋ ಡಿಸಿಲ್ವಾ ಕಾರ್ಯಕ್ರಮ ನಿರ್ವಹಿಸಿದರು. ರಫೀಕ್ ಮಾಸ್ಟರ್ ಮತ್ತು ಪ್ರೊ.ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.
*ಸುಮಾರು 7.5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಸ್ನೇಹಾಲಯ ಡಿ-ಅಡಿಕ್ಷನ್ ಸೆಂಟರ್ ವ್ಯಸನದಿಂದ ಹೋರಾಡು ತ್ತಿರುವ ವ್ಯಕ್ತಿಗಳಿಗೆ ಸಮಗ್ರ ಪುನರ್ವಸತಿ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ. ರೋಗನಿರೋಧಕ ಬೆಂಬಲ ವ್ಯವಸ್ಥೆ, ಸಮಾಲೋಚನೆ ಮತ್ತು ಸಮಾಜದ ಮುಖ್ಯವಾಹಿನಿಗೆ ಮರುಸೇರ್ಪಡೆಗೊಳಿಸುವ ಪೂರಕ ವಾತಾವರಣವನ್ನು ನೀಡುತ್ತದೆ ಎಂದು ಪ್ರಕಟನೆ ತಿಳಿಸಿದೆ.