ಉಳ್ಳಾಲ: ಚುನಾಯಿತ ಪ್ರತಿನಿಧಿಗಳ, ಕಾಂಗ್ರೆಸ್ ಪಕ್ಷದ ಮುಖಂಡ ಸಭೆ
ಉಳ್ಳಾಲ: ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ದ.ಕ. ಮತ್ತು ಉಡುಪಿ ಜಿಲ್ಲಾ ವಿಧಾನ ಪರಿಷತ್ ಉಪ ಚುನಾವಣೆ ಪ್ರಯುಕ್ತ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಹಾಗೂ ಪಕ್ಷದ ಮುಖಂಡ ಸಭೆಯು ತೊಕ್ಕೊಟ್ಟುವಿನಲ್ಲಿರುವ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಕಾಂಗ್ರೆಸ್ ಸೋಲು ಕಂಡಿರುವ ಕ್ಷೇತ್ರಗಳಲ್ಲಿ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಶ್ರಮ ವಹಿಸಿ ಕೆಲಸ ಮಾಡಬೇಕಾಗಿದೆ. ಈ ಬಗೆ ನಾವು ಮುತುವರ್ಜಿ ವಹಿಸಬೇಕಾಗುತ್ತದೆ ಎಂದು ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್ ಮಾತನಾಡಿ, ದ.ಕ. ಮತ್ತು ಉಡುಪಿ ಪ್ರತಿಷ್ಠಿತ ಸ್ಪರ್ಧೆ ಆಗಿದೆ. ಲೋಕ ಸಭಾ ಚುನಾವಣೆಯಲ್ಲಿ ನಮಗೆ ಸೋಲಾಗಿದೆ. ಈ ಕಾರಣದಿಂದ ಈ ವಿಧಾನ ಪರಿಷತ್ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು. ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ರಾಜು ಪೂಜಾರಿ ರಾಜಕೀಯದಲ್ಲಿ ಪಳಗಿದವರು. ಗ್ರಾಮ ಪಂಚಾಯತ್ ನಿಂದ ಹಿಡಿದು ಜಿಲ್ಲಾ ಪಂಚಾಯತ್ ವರೆಗೆ ಸಂಪರ್ಕ ಇಟ್ಟುಕೊಂಡು ಉತ್ತಮ ಕೆಲಸ ಮಾಡಿದವರು. ಅವರಿಗೆ ನಾವು ಬೆಂಬಲ ನೀಡಬೇಕು ಎಂದರು.
ವಿಧಾನ ಪರಿಷತ್ ಅಭ್ಯರ್ಥಿ ರಾಜು ಪೂಜಾರಿ ಮಾತನಾಡಿ, ನಾನು ಗ್ರಾಮ ಪಂಚಾಯತ್, ಸದಸ್ಯ ನಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಾಗಿ ಕೆಲಸ ಮಾಡಿದ್ದೇನೆ. ಕೆಲಸ ಹೇಗೆ ಮಾಡಬೇಕು ಎಂಬ ಅನುಭವ ಇದೆ. ಈಗ ಕಾಂಗ್ರೆಸ್ ವಿಧಾನ ಪರಿಷತ್ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡಿದೆ. ಪಕ್ಷ ಗೆಲ್ಲಬೇಕು. ಇದಕ್ಕೆ ನಿಮ್ಮ ಮತ ಬೇಕು. ಈ ಕೆಲಸವನ್ನು ಮತದಾರರಾದ ಜನಪ್ರತಿನಿಧಿಗಳು ಈಡೇರಿಸಬೇಕು ಎಂದು ಮನವಿ ಮಾಡಿದರು.
ದಿನೇಶ್ ರೈ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಮಿತ್ತ ಮಾಡಬೇಕಾದ ಕಾರ್ಯ ಹಾಗೂ ಮತದಾನ ಜಾಗೃತಿ ಬಗೆ ಮಾಹಿತಿ ನೀಡಿದರು.
ಪದ್ಮರಾಜ್ ಪೂಜಾರಿ ಮಾತನಾಡಿ ಚುನಾವಣೆಯ ಮಹತ್ವದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ. ವೇಣು ಗೋಪಾಲ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ, ಮುಖಂಡ ರಾದ ಜಿ.ಎ.ಬಾವಾ, ಟಿ.ಕೆ.ಸುಧೀರ್, ಜಲೀಲ್ ಮೋಂಟುಗೋಳಿ, ನವಾಝ್ ಕೋಡಿ, ಮುಸ್ತಫ ಉಳ್ಳಾಲ, ಚಂದ್ರ ಹಾಸ್ ಕರ್ಕೇರ, ನಾಸಿರ್ ಅಹ್ಮದ್ ಸಾಮಣಿಗೆ, ದಿನೇಶ್ ಮೂಳೂರು, ಡೆನ್ನಿಸ್ ಡಿಸೋಜ, ಚಂದ್ರಿಕಾ ರೈ, ಸುರೇಖಾ ಚಂದ್ರಹಾಸ, ಉಸ್ಮಾನ್ ಕಲ್ಲಾಪು, ಯೂಸುಫ್ ಬಾವ, ಬಾವ ಕೋಟೆಕಾರ್, ರಶೀದ್ ಕೋಡಿ, ಪ್ರಕಾಶ್ ತುಂಬೆ, ಫಾರೂಕ್, ಭರತ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಕೆ.ರಹ್ಮಾನ್ ಕೋಡಿಜಾಲ್, ಕಾರ್ಯದರ್ಶಿ ಮನ್ಸೂರ್ ಮಂಚಿಲ, ವಕ್ಫ್ ಬೋರ್ಡ್ ರಾಜ್ಯ ಸದಸ್ಯ ರಝಿಯಾ ಇಬ್ರಾಹೀಂ ಉಪಸ್ಥಿತರಿದ್ದರು.
ಕೆಡಿಪಿ ಸದಸ್ಯ ಹಮೀದ್ ಕಿನ್ಯ ಕಾರ್ಯಕ್ರಮ ನಿರೂಪಿಸಿದರು.