ಬಜ್ಪೆ: ಯುವಕ ನಾಪತ್ತೆ
ಬಜ್ಪೆ: ಇಲ್ಲಿನ ಎಂ ಆರ್ ಪಿ ಎಲ್ ಅಧೀನದಲ್ಲಿರುವ ಒಎಮ್ ಪಿಎಲ್ ಪಿಎಲ್ ಕಂಪೆನಿಯಲ್ಲಿ ಯುವಕನೋರ್ವ ನಾಪತ್ತೆಯಾ ಗಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಅಸ್ಸಾಂ ಮೂಲದ ಸಮಾನ್ ಅಲಿ (26) ನಾಪತ್ತೆಯಾದ ಯುವಕ.
ಈತ ಕಾಂಟ್ರ್ಯಾಕ್ ಕಂಪೆನಿಯೊಂದರ ಮೂಲಕ ಒಎಮ್ ಪಿಎಲ್ ಕಂಪೆನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಗುರುವಾರ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೆರಳಿದ್ದ ಯುವಕ ಬೆಳಗ್ಗಿನ ಜಾವ 4 ಗಂಟೆಯ ವರೆಗೆ ಒಎಮ್ ಪಿ ಎಲ್ ನ ಒಳಗೆ ಕೆಲಸದಲ್ಲಿ ನಿರತನಾಗಿರುವುದು ಅಲ್ಲಿನ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಆ ಬಳಿಕ ಆತ ಸಿಸಿ ಟಿವಿಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಒಎಂಪಿಎಲ್ ನ ಈ ಭಾಗದಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿದ್ದು, ಮೂರು ಬಾರಿ ಚಿರತೆಗಳು ಕಾಣಿಸಿಕೊಂಡಿವೆ. ಸಮಾನ್ ಅಲಿಯನ್ನು ಚಿರತೆ ಎಳೆದೊಯ್ದಿರುವ ಅಥವಾ ತಿಂದಿರುವ ಸಾಧ್ಯತೆ ಇದೆ ಎಂದು ಆತನ ಸಹಪಾಠಿಗಳು ಶಂಕೆ ವ್ಯಕ್ತ ಪಡಿಸಿದ್ದಾರೆ.
ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
"ಸಮಾನ್ ಅಲಿ ಎಂಬ ಯುವಕ ನಾಪತ್ತೆಯಾಗಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ದಾಖಲಿಸಿ ಕೊಂಡು ತನಿಖೆ ಆರಂಭಿಸಲಾಗಿದೆ. ಚಿರತೆ ಎಳೆದೊಯ್ದಿರುವ ಬಗ್ಗೆ ಆತನ ಸಹಪಾಠಿಗಳು ಹೇಳಿರುವ ಕಾರಣ ಸ್ಥಳಕ್ಕೆ ಶ್ವಾನದಳವನ್ನು ಕರೆಸಿ ಸಮೀಪದ ಕಾಡು ಪ್ರದೇಶದಲ್ಲಿ ತಪಾಸಣೆ ನಡೆಸಲಾಗಿದೆ. ಚಿರತೆ ದಾಳಿಯ ಕುರಿತಾಗಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ".
- ಸಂದೀಪ್, ಪೊಲೀಸ್ ನಿರೀಕ್ಷಕರು ಬಜ್ಪೆ ಪೊಲೀಸ್ ಠಾಣೆ