ಕೋವಿಡ್ ಪೀಡಿತರಿಗೆ ‘ಚಂದ್ರಾಯನ ವ್ರತ ’ ದಿಂದ ಮರುಚೈತನ್ಯ: ಡಾ.ಕೆ.ಕೃಷ್ಣ ಶರ್ಮ
ಮಂಗಳೂರು: ಕೋವಿಡ್ ಪೀಡಿತರು ‘ಚಂದ್ರಾಯನ ವ್ರತ ’ ಆಚರಣೆಯ ಮೂಲಕ ಮರುಚೈತನ್ಯ ಪಡೆಯಲು ಸಾಧ್ಯ ಎಂದು ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕವೂ ಕೋವಿಡ್ ಪೀಡಿತರು ಮೊದಲಿನಂತಾಗಲಾರರು. ಸಣ್ಣ ಪ್ರಾಯ ದವರೂ ನಮ್ಮನ್ನೆಲ್ಲ ಬಿಟ್ಟು ಹೋಗುವುದನ್ನು ನೋಡುತ್ತಿದ್ದೇವೆ. ಇದಕ್ಕೆಲ್ಲ ಹೆದರುವ ಅಗತ್ಯ ಇಲ್ಲ. ಇಂಥವರೂ ಧೈರ್ಯ ದಿಂದ ಬದುಕು ಮುನ್ನಡೆಸುವಂತೆ ಮಾಡುವ ಸಾಮರ್ಥ್ಯ ಯೋಗಕ್ಕೆ ಇದೆ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ಕೃಷ್ಣ ಶರ್ಮ ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯ ಧಾಮ ಯೋಗ ವಿದ್ಯಾ ಟ್ರಸ್ಟ್, ಪದುವ ಪ್ರೌಢಶಾಲೆ, ಬಿಕರ್ನಕಟ್ಟೆಯ ತಪಸ್ವಿ ಯೋಗ ಚಿಕಿತ್ಸಾ ಕೇಂದ್ರದ ಆಶ್ರಯದಲ್ಲಿ ಪದುವಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ರವಿವಾರ ಏರ್ಪಡಿಸಿದ್ದ ‘ಯೋಗ ಸಂಭ್ರಮ 2024’ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
‘ನಿಯಮ ಪ್ರಕಾರ ಅಭ್ಯಾಸ ಮಾಡಿದರೆ ಶರೀರ, ಬುದ್ದಿ ಹಾಗೂ ಮನಸ್ಸು ಅಭಿವೃದ್ಧಿ ಆಗುತ್ತದೆ ಎಂಬುದು ಯೋಗ ಸಂಶೋಧನೆಗಳ ಸಾರ. ಚಿತ್ತ ಮತ್ತು ಮನಸ್ಸನ್ನು ನಿಗ್ರಹಿಸುವ ಒಂದು ತಿಂಗಳ ವ್ರತಾಚರಣೆಯೇ ಚಂದ್ರಾಯನ ವಾಗಿದೆ ಎಂತಹವರೂ ತಮ್ಮ ಮನಸ್ಸನ್ನು ಮತ್ತು ಶರೀರವನ್ನು ನಿಗ್ರಹಿಸಬಲ್ಲ ಸಾಮರ್ಥ್ಯವನ್ನು ಇದು ತಂದುಕೊಡಬಲ್ಲುದು ಎಂದರು.
ಯೋಗ ಸಂಶೋಧಕ ಡಾ.ರಂಗಪ್ಪ ಅವರು ರಚಿಸಿರುವ ಸಂಶೋಧನೆ ಆಧರಿತ ಕೃತಿ, ‘ದಿ ಇಫೆಕ್ಟ್ಸ್ ಆಫ್ ಯೋಗಿಕ್ ಪ್ರಾಕ್ಟೀಸ್ ವಿತ್ ಚಂದ್ರಾಯನ ವ್ರತ ಫಾರ್ ದಿ ಒಬೇಸ್ ಸಬ್ಜೆಕ್ಟ್ಸ್’ ಅನ್ನು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಸುರೇಶ್ ಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು.
‘ಯೋಗ ವ್ಯಾಯಾಮವಲ್ಲ. ಅದು ನಮ್ಮನ್ನು ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿಯೂ ಗಟ್ಟಿಗೊಳಿಸುತ್ತವೆ. ದೈನಂದಿನ ಬದುಕಿನಲ್ಲಿ 30 ನಿಮಿಷವನ್ನಾದರೂ ಯೋಗಕ್ಕೆ ಮೀಸಲಿಡಬೇಕು’ ಎಂದರು.
ಕೃತಿ ಪರಿಚಯ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಉಪ ನ್ಯಾಸಕ ಡಾ. ಅಜಿತೇಶ್ ಎನ್.ಎಚ್ ಮಾತನಾಡಿ ‘ಚಂದ್ರಾಯನ ವ್ರತ ಒಂದು ರೀತಿಯ ತಪಸ್ಸು. ಶರೀರ ಮತ್ತು ಮನಸ್ಸನ್ನು ಶುದ್ಧೀಕರಿಸುವ ಹಾಗೂ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ನೆರವಾಗುವ ಪ್ರಕ್ರಿಯೆಗೆ ಸಂಬಂಧಿಸಿದ ಸಂಶೋಧನೆ ಆಧರಿಸಿದ ವಿವರಗಳು ಈ ಕೃತಿಯಲ್ಲಿವೆ’ ಎಂದರು.
ಅತಿಥಿಯಾಗಿದ್ದ ಪದುವಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ.ಅರುಣ್ ವಿಲ್ಸನ್ ಲೋಬೊ, ‘ಮದ್ದು ತೆಗದು ಕೊಂಡರೆ ಸಂತೋಷ ಸಿಗದು. ಅದರೆ ಸಂತೋಷದಂತಹ ಮದ್ದು ಬೇರೆ ಇಲ್ಲ. ದೈಹಿಕ, ಮಾನಸಿಕ ಹಾಗೂ ಅಧ್ಯಾತ್ಮಿಕವಾಗಿ ಯೋಗ ಸಮಾಧಾನ ಮತ್ತು ಶಾಂತಿ ನೀಡುವ ಪ್ರಕ್ರಿಯೆ’ ಎಂದರು.
ಕೆಎಂಸಿಯ ತಜ್ಞ ವೈದ್ಯ, ಡಾ.ಬಸವ ಪ್ರಭು ಆಚಪ್ಪ, ಮಾತನಾಡಿ ಕೋವಿಡ್ನಿಂದಾಗಿ ತಾನೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಬಳಿಕ ಮೈತೂಕ ಹೆಚ್ಚಾಯಿತಲ್ಲದೇ, ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಿತು. ಎರಡು ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ಈಗ ಆರೋಗ್ಯದಲ್ಲಿ ಹಲವಾರು ಸುಧಾರಣೆಗಳನ್ನು ಕಂಡಿದ್ದೇನೆ ಎಂದರು.
ಸತತ 35 ನಿಮಿಷ 35 ಸೆಕೆಂಡ್ ‘ಪದ್ಮ ಶೀರ್ಷಾಸನ’ ಪ್ರದರ್ಶಿಸಿ ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಸ್ಥಾನ ಪಡೆದ ಹೆರ್ಮುಂಡೆಯ ಪ್ರತ್ಯಕ್ಷ್ ಕುಮಾರ್ ಅವರನ್ನು ಹಾಗೂ ಡಾ.ಕೃಷ್ಣ ಶರ್ಮ ಅವರನ್ನು ಅಭಿನಂದಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ತಪಸ್ವಿ ಯೋಗ ಚಿಕಿತ್ಸಾ ಕೇಂದ್ರದ ಡಾ.ರಂಗಪ್ಪ ‘ ರಾಷ್ಟ್ರ ಎಂದರೆ ಅದರ ಮಾನವ ಸಂಪನ್ಮೂಲ. ಸಶಕ್ತ ಜನರಿದ್ದರೆ ರಾಷ್ಟ್ರವೂ ಸಶಕ್ತವಾಗುತ್ತದೆ. ಯೋಗದ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ, ಸದೃಢ ವ್ಯಕ್ತಿತ್ವ ನಿರ್ಮಾಣದ ಆಶಯವನ್ನಿಟ್ಟುಕೊಂಡು ತಪಸ್ವಿ ಯೋಗ ಕೇಂದ್ರ ಕಾರ್ಯನಿರ್ವಹಿಸುತ್ತಿದೆ’ ಎಂದರು. ಸಂಸ್ಥೆಯ ಸಾಧನೆಗಳನ್ನು ಅವರು ಪರಿಚಯಿಸಿದರು. ತಪಸ್ವೀ ಯೋಗ ರಚನಾ ವಂದಿಸಿದರು.