ಕೂರ್ಮಾಸನದಲ್ಲಿ ಮಂಗಳೂರಿನ ವಿದ್ಯಾರ್ಥಿನಿ ಮೇಘನಾ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆ
ಮಂಗಳೂರು: ನಗರದ ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಹಾಗೂ ಯೋಗಪಟು ಮೇಘನಾ ಎಚ್.ಶೆಟ್ಟಿಗಾರ್ ಒಂದು ಗಂಟೆ ಮತ್ತು 17 ಸೆಕೆಂಡ್‌ಗಳಲ್ಲಿ ‘ಕೂರ್ಮಾಸನ’ ನಡೆಸಿ ದೀರ್ಘಾವಧಿಯ ಪ್ರದರ್ಶನ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆಯಾಗಿದ್ದಾರೆ.
ಇದರೊಂದಿಗೆ ಈ ಹಿಂದೆ 2021, ಆಗಸ್ಟ್ 1 ರಲ್ಲಿ ಮಧ್ಯಪ್ರದೇಶದ ಶ್ವೇತಾ ನೆಮ್ ಅವರು 45 ನಿಮಿಷ 26 ಸೆಕೆಂಡ್ 50 ಮಿಲಿ ಸೆಕೆಂಡ್‌ನಲ್ಲಿ ನಿರ್ಮಿಸಿದ್ದ ಕೂರ್ಮಾಸನ ಯೋಗ ಭಂಗಿಯ ದೀರ್ಘಾವಧಿಯ ಪ್ರದರ್ಶನದ ದಾಖಲೆಯನ್ನು ಮುರಿ ಯುವ ಮೂಲಕ ಮೇಘನಾ ಎಸ್.ಶೆಟ್ಟಿಗಾರ್ ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಅವರ ಹೆಸರು ಸೇರ್ಪಡೆಗೊಂಡಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ 2024 ಸೆ.27 ರಂದು ಇವರ ಹೊಸ ದಾಖಲೆ ಸೇರ್ಪಡೆಗೊಂಡಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ಮುಖ್ಯ ಸಂಪಾದಕರಾದ ಡಾ.ಬಿಸ್ವಾರೂಪ್ ರಾಯ್ ಚೌಧರಿ ಅವರು ದೃಢಪಡಿಸಿದ್ದಾರೆ. ಈ ಸಾಧನೆಗೆ ಮೇಘನಾ ಅವರಿಗೆ ಇಂಡಿಯಾ ಬುಕ್ , ಪದಕ ಹಾಗೂ ಪ್ರಮಾಣಪತ್ರ ದೊರೆತಿದೆ.
ಮೇಘನಾ ಸಾಧನೆ ಶಾಲೆಗೆ ಹೆಮ್ಮೆ: ಸಿ.ಉಜ್ವಲಾ
ಲೇಡಿಹಿಲ್‌ನ ವಿಕ್ಟೋರಿಯಾ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮೇಘನಾ ಎಚ್. ಶೆಟ್ಟಿಗಾರ್ ಯೋಗ ಪ್ರದರ್ಶನ ದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆಯಾಗುವ ಮೂಲಕ ಮಂಗಳೂರು ಮತ್ತು ನಮ್ಮ ಶಿಕ್ಷಣ ಸಂಸ್ಥೆಗೆ ಹೆಮ್ಮೆ ಮೂಡಿಸಿದ್ದಾರೆ ಎಂದು ವಿಕ್ಟೋರಿಯಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಉಜ್ವಲಾ ಎ.ಸಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 13 ಹರೆಯದ ಮೇಘನಾ ಪ್ರತಿಭಾ ವಂತ ವಿದ್ಯಾರ್ಥಿನಿ. ಆಕೆ 8ರ ಹರೆಯದಲ್ಲೇ ಯೋಗ ಅಭ್ಯಾಸ ಆರಂಭಿಸಿದ್ದರು. ಶಿಕ್ಷಕರ ಮತ್ತು ಹೆತ್ತವರ ಪ್ರೋತ್ಸಾಹ ಮತ್ತು ಕಠಿಣ ಶ್ರಮದಿಂದ ಅವರು ಈ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನನಗೆ ಕವಿತಾ ಟೀಚರ್ ಸ್ಪೂರ್ತಿ: ಮೇಘನಾ
ನನ್ನ ಸಾಧನೆಗೆ ಕವಿತಾ ಟೀಚರ್ ಸ್ಪೂರ್ತಿಯಾಗಿದ್ದಾರೆ. ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದವರು. ಅವ ರಂತೆ ನನಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡುವ ಕನಸಿನೊಂದಿಗೆ ನಿರಂತರ ಪ್ರಯತ್ನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಕವಿತಾ ಟೀಚರ್ ನನಗೆ ಈ ಸಾಧನೆಗೆ ನೆರವಾಗಿದ್ದಾರೆ ಎಂದರು.
ತರಬೇತಿ: ನಮ್ಮ ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ ಯಿಂದಲೇ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಲಾಗುತ್ತದೆ. ನಿರಂತರ ಪ್ರಯತ್ನದಿಂದ ಮೇಘನಾ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಶಾಲಾ ಶಿಕ್ಷಕಿ ಕವಿತಾ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ನಾನು ಕೂಡಾ ಯೋಗದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದೇನೆ. ಅದೇ ರೀತಿ ನನ್ನ ಶಾಲೆಯ ಮಕ್ಕಳನ್ನು ರೂಪಿ ಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ ಎಂದರು.
ವಿದ್ಯಾರ್ಥಿನಿ ಮೇಘನಾ ಈ ಸಾಧನೆ ಮಾಡಿದ್ದಾರೆ. ಇನ್ನೊಬ್ಬರು ಸಾಧನೆಯ ಹಾದಿಯಲಿದ್ದಾರೆ. ನನ್ನಲ್ಲಿ ತರಬೇತಿ ಪಡೆದಿ ರುವ ಕನಿಷ್ಠ 10 ಮಕ್ಕಳಾದರೂ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಹೆಸರನ್ನು ಬರೆಸಬೇಕು ಎನ್ನುವುದು ನನ್ನ ಟಾರ್ಗೆಟ್ ಆಗಿದೆ. ನನ್ನ ಸಾಧನೆಗೆ ಎರಡು ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿರುವ ಮಂಗಳಾ ಈಜುಕೊಳದ ಚಂದ್ರಶೇಖರ್ ಮತ್ತು ಜೀವನ್ ವಿಟ್ಲ ಅವರು ನೆರವಾಗಿದ್ದಾರೆ ಎಂದರು.
ಮೇಘನಾ ಅವರ ತಂದೆ ದೇರೆಬೈಲ್ ನೆಕ್ಕಿಲ ಗುಡ್ಡೆಯ ಹರೀಶ್ ಶೆಟ್ಟಿಗಾರ್, ತಾಯಿ ಕವಿತಾ ಶೆಟ್ಟಿಗಾರ್ ಮಂಗಳಾ ಈಜುಕೊಳದ ಚಂದ್ರ ಶೇಖರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.