ಚಲನಚಿತ್ರ ಗೀತ ಗಾಯನ ಸ್ಪರ್ಧೆ: ಯೆನೆಪೊಯ ಕಾಲೇಜಿನ ಡಾ.ಕುಂಬಳೆ ಅನಂತ ಪ್ರಭುಗೆ ಪ್ರಶಸ್ತಿ
ಮಂಗಳೂರು: ರಾಜಸ್ಥಾನದ ಜೈಪುರದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಮಟ್ಟದ ವೃತ್ತಿನಿರತ ವೈದ್ಯರುಗಳ ಚಲನಚಿತ್ರ ಗೀತಗಾಯನ ಸ್ಪರ್ಧೆಯ 55 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮಂಗಳೂರು ಯೆನೆಪೊಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಾಮಾನ್ಯ ಶಸ್ತ್ರಚಿಕಿತ್ಸೆ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಅನಂತ ಪ್ರಭು ಕುಂಬಳೆ ಅವರು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ವಿಜೇತರಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್ ಟ್ರೋಫಿ ಪಡೆದಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಅನಂತ ಪ್ರಭು ಕುಂಬಳೆ ಅವರು ಜೂ.24 ರಿಂದ ಸೆ.29 ತನಕ ನಡೆದ ಸ್ಪರ್ಧೆಯಲ್ಲಿ ಯುಕೆ, ಅಮೆರಿಕ , ದಕ್ಷಿಣ ಆಫ್ರಿಕಾ, ಶ್ರೀಲಂಕಾ ಸಹಿತ ಜಗತ್ತಿನ ವಿವಿಧೆಡೆಗಳಿಂದ ಒಟ್ಟು 7,000 ಕ್ಕೂ ಅಧಿಕ ವೃತ್ತಿನಿರತ ವೈದ್ಯರುಗಳು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಯ ಬಳಿಕ ಅಂತರ್‌ರಾಷ್ಟ್ರೀಯ ಮಟ್ಟದ ಪ್ರತೀ ವಿಭಾಗದಲ್ಲಿ ತಲಾ ಐದು ಮಂದಿ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದರು. ಯೆನೆಪೊಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಾಲೇಜಿನ ಸಹೋದ್ಯೋಗಿ ಗಳು, ಅಧಿಕಾರಿ ವೃಂದ, ಕುಲಪತಿ ಡಾ. ವೈ ಅಬ್ದುಲ್ಲ ಕುಂಞಿ ಮತ್ತು ಸಹ ಕುಲಪತಿಗಳಾದ ಯೆನೆಪೋಯ ಫರಾದ್ , ಐಎಂಎ ಮಂಗಳೂರಿನ ಸಂಗೀತ್ ಬಹಾರ್ ಕರೋಕೆ ಗ್ರೂಪ್‌ನ ನಿರಂತರ ಬೆಂಬಲದಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಅವರು ಸ್ಮರಿಸಿದರು.
ಸುದ್ದಿಗೋಷ್ಠಿಯಲ್ಲಿ ಐಎಂಎ ರಾಜ್ಯ ಘಟಕ ವಿಭಾಗೀಯ ಸಂಚಾಲಕ ಡಾ.ಜಿ.ಕೆ.ಭಟ್, ಅರಿವಳಿಕೆ ಶಾಸ್ತ್ರಜ್ಞ ಡಾ.ಜ್ಞಾನೇಶ್ ಕಾಮತ್, ಯೆನೆಪೊಯ ವೈದ್ಯಕೀಯ ಕಾಲೇಜಿನ ಸೀನಿಯರ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವಿಜಯಾನಂದ ಶೆಟ್ಟಿ ಉಪಸ್ಥಿತರಿದ್ದರು.
*ಅ.26ರಂದು ಸನ್ಮಾನ: ಅಂತರ್‌ರಾಷ್ಟ್ರೀಯ ಮಟ್ಟದ ವೃತ್ತಿನಿರತ ವೈದ್ಯರುಗಳ ಚಲನಚಿತ್ರ ಗೀತಗಾಯನ ಸ್ಪರ್ಧೆಯಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ , ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಯೆನೆಪೊಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಾಮಾನ್ಯ ಶಸ್ತ್ರಚಿಕಿತ್ಸೆ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಅನಂತ ಪ್ರಭು ಕುಂಬಳೆ ಅವರಿಗೆ ಸನ್ಮಾನ ಸಮಾರಂಭ ಯೆನೆಪೊಯ ಮೆಡಿಕಲ್ ಕಾಲೇಜು ಆ್ಯಂಡ್ ಹಾಸ್ಪಿಟಲ್ ಹಾಗೂ ಐಎಂಎ ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.26ರಂದು ಸಂಜೆ 6:30ಕ್ಕೆ ನಗರದ ಕದ್ರಿಯ ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಗಿದೆ ಡಾ.ಜಿ.ಕೆ.ಭಟ್ ಎಂದು ಡಾ.ಜಿ.ಕೆ.ಭಟ್ ತಿಳಿಸಿದ್ದಾರೆ.