ಮಂಗಳೂರು| ಬಸ್ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸಲು ಗಡುವು
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧಾರ
ಮಂಗಳೂರು: ನಗರದಲ್ಲಿ ಓಡಾಟ ನಡೆಸುವ ಸಿಟಿ ಬಸ್ಗಳನ್ನು ಹೊರತುಪಡಿಸಿ ಎಕ್ಸ್ಪ್ರೆಸ್, ಕಾಂಟ್ರಾಕ್ಟ್ ಕ್ಯಾರೇಜ್, ಸರ್ವಿಸ್ ಬಸ್ಗಳು ಕಡ್ಡಾಯವಾಗಿ ಬಾಗಿಲು ಅಳವಡಿಸಿ ಕಾರ್ಯಾಚರಣೆ ನಡೆಸುವಂತೆ ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಗಡುವು ವಿಧಿಸಲಾಗಿದೆ.
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈಗಾಗಲೇ ಸ್ವಯಂಚಾಲಿತ ಬಾಗಿಲನ್ನು ಹೊಂದಿರುವ ಬಸ್ಗಳು ಕಡ್ಡಾಯವಾಗಿ ಇಂದಿನಿಂದಲೇ ಈ ಆದೇಶವನ್ನು ಪಾಲಿಸ ಬೇಕು. ಬಾಗಿಲನ್ನು ತೆಗೆದು ಹಾಕಿರುವ ಮತ್ತು ಬಾಗಿಲು ಇಲ್ಲದ ಬಸ್ಗಳಿಗೆ ತಕ್ಷಣ ಬಾಗಿಲು ಅಳವಡಿಸಬೇಕು. ಡಿ.10ರೊಳಗೆ ಕಡ್ಡಾಯವಾಗಿ ಈ ಆದೇಶವನ್ನು ಬಸ್ ಮಾಲಕರು ಅನುಷ್ಠಾನಗೊಳಿಸಬೇಕು. ತಪ್ಪಿದಲ್ಲಿ ಸಾರಿಗೆ ನಿಯಮದ ಉಲ್ಲಂಘನೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಲ್ಲೈ ಮುಗಿಲನ್ ಎಚ್ಚರಿಸಿದರು.
ಸಂಚಾರದ ವೇಳೆ ಎಲ್ಲ ಬಸ್ಗಳಲ್ಲೂ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಬಾಗಿಲು ಹಾಕಿಕೊಳ್ಳುವುದು ಕಡ್ಡಾಯ ವಾಗಿದೆ. ಇದರ ಬಗ್ಗೆ ಹಲವು ಬಾರಿ ಸೂಚನೆ ನೀಡಿದರೂ ಪಾಲನೆಯಾಗುತ್ತಿಲ್ಲ. ಹೀಗಾಗಿ ತಕ್ಷಣದಿಂದಲೇ ಬಾಗಿಲು ಅಳವಡಿಸಲು ಎಲ್ಲ ಖಾಸಗಿ ಬಸ್ಗಳು ಕ್ರಮ ಕೈಗೊಳ್ಳಬೇಕು. ನಗರ ಸಾರಿಗೆ ಬಸ್ಗಳಿಗೆ ಬಾಗಲು ಅಳವಡಿಕೆ ಕುರಿತಂತೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೆಎಸ್ಆರ್ಟಿಸಿಗೆ ಹೊಸ ರೂಟ್ ಪರ್ಮಿಟ್ ನೀಡುವುದಕ್ಕೆ ವಿರೋಧ ಮಂಗಳೂರು-ಕಾರ್ಕಳ, ಬಜಪೆ-ತಲಪಾಡಿ ಸೇರಿ ದಂತೆ ಎಂಟು ಹೊಸ ರೂಟ್ಗಳಲ್ಲಿ ಪರವಾನಿಗೆ ನೀಡುವಂತೆ ಕೆಎಸ್ಆರ್ಟಿಸಿ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಖಾಸಗಿ ಬಸ್ ಮಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈಗಾಗಲೇ ಖಾಸಗಿ ಬಸ್ ಮಾಲಕರು ಸೊರಗಿ ದ್ದಾರೆ. ಹೀಗಾಗಿ ಕೆಎಸ್ ಆರ್ಟಿಸಿಗೆ ಪರವಾನಿಗೆ ನೀಡದಂತೆ ಮನವಿ ಮಾಡಿದರು.
ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಖಾಸಗಿ ಬಸ್ ಮಾಲಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಬಳಿ 15 ದಿನಗಳ ಕಾಲಾವ ಕಾಶ ನೀಡುವಂತೆ ವಿನಂತಿಸಿದರು. ಬಸ್ ಹಾಕಲು ಸಾರ್ವಜನಿಕರ ಬೇಡಿಕೆ ಇದೆ. ಸರಕಾರದ ಶಕ್ತಿ ಯೋಜನೆಯನ್ನು ಈ ರೂಟ್ಗಳಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅವಕಾಶ ನೀಡಿ. ಮಾಧ್ಯಮಗಳಲ್ಲೂ ಸಾರ್ವಜನಿಕರು ಬಸ್ಗಾಗಿ ಮಾನವಿ ಮಾಡಿದ್ದಾರೆ.ಆ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದಿಂದ ವಿವಿಧ ಮಾರ್ಗಗಳಲ್ಲಿ ಈ ಹಿಂದೆ 56 ಸಿಂಗಲ್ ಟ್ರಿಪ್ಗಳಿಗೆ ಪರವಾನಿಗೆ ಕೇಳಿತ್ತು. ನ್ಯಾಯಾಲಯದ ತಡೆಯಾಜ್ಞೆಯ ಕಾರಣದಿಂದಾಗಿ ಪರವಾನಿಗೆ ಸಿಕ್ಕಿಲ್ಲ. ಇದೀಗ ೮ ಟ್ರಿಪ್ಗಳ ಬೇಡಿಕೆಯಲ್ಲಿ ಕೇವಲ 3 ಟ್ರಿಪ್ಗೆ ಅವಕಾಶ ನೀಡಲಾಗಿದೆ. ಕೇಂದ್ರ ಸರಕಾರದ ಏರಿಯಾ ಸ್ಕೀಂ ನಿಯಮದ ಪ್ರಕಾರ ಹಾಗೂ ಚಾಪ್ಟರ್-೫ರಂತೆ ಹೊಸ ರೂಟ್ ಪರವಾನಿಗೆ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ ಎಂದರು.
ಮಂಗಳೂರು-ಕಾರ್ಕಳ, ತಲಪಾಡಿ-ಬಜ್ಪೆ ಸೇರಿದಂತೆ ಎಂಟು ರೂಟ್ಗಳಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಸಾರಿಗೆ ಪ್ರಾಧಿಕಾರಕ್ಕೆ ಮನವಿ ಮಾಡಿದರು.
ಸ್ಟೇಟ್ ಬ್ಯಾಂಕ್ನಿಂದ ಬಸ್ ಓಡಾಟಕ್ಕೆ ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯದ ತಡೆಯಾಜ್ಞೆ ಹಾಗೂ ವಿವಿಧ ಕೋರ್ಟ್ ಗಳಲ್ಲಿ ಆಕ್ಷೇಪಣೆ ಇರುವುದರಿಂದ ಹೊಸ ಪರವಾನಿಗೆ ನೀಡಬಾರದು ಎಂದು ಖಾಸಗಿ ಬಸ್ ಮಾಲಕರು ವಾದ ಮಂಡಿಸಿದರು.
ಬಸ್ಗಳ ಅನಾರೋಗ್ಯಕರ ಪೈಪೋಟಿ, ಸಾಲುಗಟ್ಟಿ ಸಂಚರಿಸಬೇಕಾದ ಅನಿವಾರ್ಯತೆ, ಟ್ರಾಫಿಕ್ ಸಮಸ್ಯೆ ಈ ಕಾರಣ ದಿಂದಾಗಿ ಬಸ್ಗಳಿಗೆ ಕೆಲವೊಮ್ಮೆ ನಿಗದಿತ ಗುರಿ ‘ಎ’ಯಿಂದ ‘ಝೆಡ್’ ಗತನಕ ತಲುಪಲು ಸಾಧ್ಯವಾಗದೆ ‘ವೈ’ ಯಿಂದಲೇ ವಾಪಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಹನ ಮಾಲಕರ ಸಂಘಟನೆಯ ಪ್ರತಿನಿಧಿಗಳು ಸಭೆಯ ಮುಂದೆ ತಮ್ಮ ಸಮಸ್ಯೆಯನ್ನು ತೆರೆದಿಟ್ಟರು.
ರಸ್ತೆ ದುರಸ್ತಿಯಾಗದೆ ಪರವಾನಿಗೆ ನೀಡಬಾರದು ಎಂಬ ಆಗ್ರಹ ಸಭೆಯಲ್ಲಿ ಕೇಳಿ ಬಂತು.
*ಜಿಪಿಎಸ್ ಅಳವಡಿಕೆಗೆ ಸೂಚನೆ: ಮಂಗಳೂರಲ್ಲಿ ಸ್ಮಾರ್ಟ್ ಸಿಟಿಯ ಕಮಾಂಡಿಂಗ್ ಕಂಟ್ರೋಲ್ ಸೆಂಟರ್ ಇದೆ. ಇದರ ಸುಪರ್ದಿಯಲ್ಲಿ ಖಾಸಗಿ ಬಸ್ಗಳು ಕೂಡ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದೆ. ಜಿಪಿಎಸ್ ಜೊತೆಗೆ
ಪ್ಯಾನಿಕ್ ಬಟನ್ ಅಳವಡಿಕೆ ನಿಟ್ಟಿನಲ್ಲೂ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿರ್ದೇಶನ ನೀಡಿದರು.
ಜಿಪಿಎಸ್ ಅಳವಡಿಸಿ ಸ್ಮಾರ್ಟ್ಸಿಟಿಯ ಕಂಟ್ರೋಲ್ ರೂಂ ಜೊತೆಗೆ ಸಂಪರ್ಕ ಸಾಧಿಸಬೇಕು. ಇದರಿಂದ ಬಸ್ಗಳು ಎಲ್ಲೆಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿ ಸುಲಭವಾಗಿ ಸಿಗುತ್ತದೆ ಎಂದು ಮುಲ್ಲೈ ಮುಗಿಲನ್ ಹೇಳಿದರು.
*ಪ್ರೀಪೇಯ್ಡ್ ಆಟೋ ಬಗ್ಗೆ ಪ್ರತ್ಯೇಕ ಸಭೆ
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರಾತ್ರಿ ವೇಳೆ ಪ್ರೀಪೇಯ್ಡ್ ಆಟೋರಿಕ್ಷಾ ಸಂಚಾರ ಇಲ್ಲದೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ಕೆಸಿಸಿಐ ಪ್ರತಿನಿಧಿಯೊಬ್ಬರು ಪ್ರಸ್ತಾಪಿಸಿದರು. ಈ ಬಗ್ಗೆ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ರೈಲ್ವೆ ಅಧಿಕಾರಿಗಳು, ಆಟೋರಿಕ್ಷಾ ಸಂಘಟನೆಗಳು ಹಾಗೂ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳನ್ನು ಒಳಗೊಂಡಂತೆ ಪ್ರತ್ಯೇಕ ಸಭೆ ಕರೆಯುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದರು.
*ಸ್ಟೇಟ್ ಬ್ಯಾಂಕ್ ಸೆಂಟ್ರಲ್ ನಿಲ್ದಾಣವಾಗಲಿ: ನಗರದ ಸ್ಟೇಟ್ ಬ್ಯಾಂಕ್ನ ಬಳಿಯ ನಿಲ್ದಾಣದ ಹೆಸರು ‘ಸ್ಟೇಟ್ ಬ್ಯಾಂಕ್ ಸೆಂಟ್ರಲ್ ಎಂದು ಮರು ನಾಮಕರಣ ಮಾಡುವಂತೆ ಖಾಸಗಿ ಬಸ್ ಮಾಲೀಕರ ಸಂಘದ
ಮಾಜಿ ಅಧ್ಯಕ್ಷ ದಿಲ್ರಾಜ್ ಆಳ್ವ ಅವರು ಸಾರಿಗೆ ಪ್ರಾಧಿಕಾರದ ಸಭೆಗೆ ಮನವಿ ಮಾಡಿದರು.
ಹಂಪನಕಟ್ಟೆ ತನಕ ಪಾಸ್ ವಿದ್ಯಾರ್ಥಿಗಳಿಗೆ ತೊಂದರೆ: ಮಂಗಳೂರು ವಿವಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಬರುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಹಂಪನಕಟ್ಟೆ ತನಕ ಪಾಸ್ ಇದೆ. ಅವರಿಗೆ ಸ್ಟೇಟ್ ಬ್ಯಾಂಕ್ ಬಸ್ನಿಲ್ದಾಣದ ತನಕ ಬರುವಂತಿಲ್ಲ. ಒಂದು ವೇಳೆ ಬಂದರೆ ಅವರು ಟಿಕೆಟ್ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳ ಬರುವಾಗ ಕಾಲೇಜಿನ ಬಳಿ ಇಳಿಯುತ್ತಾರೆ. ಹೋಗುವಾಗ ಕಾಲೇಜಿನ ಮುಂದಿನ ಬಸ್ ಸ್ಟಾಪ್ನಲ್ಲಿ ಬಸ್ ಹತ್ತಲು ಕಷ್ಟವಾಗುತ್ತದೆ. ಒಂದು ವೇಳೆ ಸ್ಟೇಟ್ ಬ್ಯಾಂಕ್ ನಿಲ್ದಾಣಕ್ಕೆ ಹೋದರೆ ದುಡ್ಡು ಕೊಟ್ಟು ಟಿಕೆಟ್ ಮಾಡಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಲೈಟ್ ಹೌಸ್ ತನಕ ಹೋಗಿ ಬಸ್ ಹತ್ತಬೇಕಾಗಿದೆ ಎಂದು ವಿದ್ಯಾರ್ಥಿಗಳು ತಮಗೆ ನೀಡಿರುವ ದೂರನ್ನು ಡಿಸಿಪಿ (ಟ್ರಾಫಿಕ್) ದಿನೇಶ್ ಕುಮಾರ್ ಸಭೆಯ ಮುಂದಿಟ್ಟರು.
ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವುದಾಗಿ ಕೆಎಸ್ಆರ್ಟಿಸಿ ಡಿಸಿ ರಾಜೇಶ್ ಸಭೆಗೆ ತಿಳಿಸಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ ಅಗ್ರವಾಲ್, ಉಪ ಆಯುಕ್ತ ದಿನೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಆನಂದ್, ದ.ಕ.ಜಿಲ್ಲಾ ಎಸ್ಪಿ ಯತೀಶ್ ಎನ್ , ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಉಪಸ್ಥಿತರಿದ್ದರು.