ಸಾಹಿತ್ಯ ಸಮ್ಮೇಳನ ಊರ ಹಬ್ಬವಾಗಲಿ: ತಹಶೀಲ್ದಾರ್ ಪುಟ್ಟರಾಜು
ತೊಕ್ಕೊಟ್ಟು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಊರು ಊರುಗಳಲ್ಲಿ ಕನ್ನಡದ ಹಬ್ಬದಂತೆ ಸಂಭ್ರಮಿಸುವಂತಾಗಲಿ. ನಾವೆಲ್ಲ ಕನ್ನಡಿಗರು ಎಂಬ ಸಂಭ್ರಮ ಅಭಿಮಾನ ವನ್ನು ಸಮ್ಮೇಳನ ಉಂಟುಮಾಡಲಿ ಎಂದು ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು ಹೇಳಿದರು.
ಅವರು ಗುರುವಾರ ಸಂಜೆ ತೊಕ್ಕೊಟ್ಟಿನಲ್ಲಿ ಸಮ್ಮೇಳನದಂಗವಾಗಿ ಆಗಮಿಸಿದ ಸಾಹಿತ್ಯ ರಥವನ್ನು ಉಳ್ಳಾಲ ತಾಲೂಕು ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಸ್ವಾಗತಿಸಿ ಮಾತನಾಡಿದರು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಎಂ.ಪಿ ಶ್ರೀನಾಥ್ ಸಮ್ಮೇಳನದ ಆಶಯವನ್ನು ವಿವರಿಸಿ ಸಮ್ಮೇಳನದ ಯಶಸ್ಸಿಗೆ ಹಾರೈಸಿದರು.
ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಮಾತನಾಡಿ ಸಾಹಿತ್ಯ ಸಮ್ಮೇಳನ ಯಾವುದೇ ಗೊಂದಲಗಳಿಲ್ಲದೇ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡದ ವೈಚಾರಿಕತೆಯನ್ನು ಪ್ರಚುರಪಡಿಸಲಿ ಎಂದರು.
ಉಳ್ಳಾಲ ತಾಲೂಕು ಕಾರ್ಯನಿರ್ವಹಣಾಧಿಕಾರಿ ಗುರುದತ್ತ್, ನಗರಸಭಾಧ್ಯಕ್ಷೆ ಶಶಿಕಲಾ ಚೆಂಬುಗುಡ್ಡೆ, ಕೌನ್ಸಿಲರ್ ಅಸ್ಗರ್ ಅಲಿ, ಉಳ್ಳಾಲ ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಕೋಶಾಧಿಕಾರಿ ಲ.ಚಂದ್ರಹಾಸ ರೈ ದೇರಳಕಟ್ಟೆ, ಉಳ್ಳಾಲ ಕಸಾಪ ಹೋಬಳಿ ಅಧ್ಯಕ್ಷೆ ವಿಜಯಲಕ್ಷ್ಮಿ ಪ್ರಸಾದ ರೈ, ಪದಾಧಿಕಾರಿಗಳಾದ ತೋನ್ಸೆ ಪುಷ್ಕಳ ಕುಮಾರ್, ತ್ಯಾಗಂ ಹರೇಕಳ, ಗುಣಾಜೆ ರಾಮಚಂದ್ರ ಭಟ್, ಕಾರ್ಯದರ್ಶಿ ಎಡ್ವರ್ಡ್ ಲೋಬೋ, ಮುಖಂಡರಾದ ಪ್ರಸಾದ್ ರೈ ಕಲ್ಲಿಮಾರ್, ನಗರಸಭೆಯ ಪದಾಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು. ತ್ಯಾಗಂ ಹರೇಕಳ ನಿರೂಪಿಸಿದರು.