ತಂತ್ರಜ್ಞಾನದ ಸ್ಫೋಟವು ಜಗತ್ತನ್ನು ಹತ್ತಿರ ಮಾಡಿದಂತೆ ತೋರಿದರೂ ಸಂಬಂಧಗಳು ದೂರವಾಗುತ್ತಿದೆ: ಎಸ್.ನರೇಂದ್ರ
ಪಿಆರ್ ಸಿಐ ಸಮ್ಮೇಳನದ ಉದ್ಘಾಟನೆ
ಮಂಗಳೂರು: ತಂತ್ರಜ್ಞಾನದ ಸ್ಫೋಟವು ಜಗತ್ತನ್ನು ಹತ್ತಿರ ಮಾಡಿದಂತೆ ತೋರಿದರೂ ಸಂಬಂಧಗಳು ದೂರವಾಗುತ್ತಿದೆ ಎಂಬುದನ್ನು ಅಧ್ಯಯನ ವರದಿಗಳು ದೃಢಪಡಿಸಿವೆ.ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಪರ್ಕ ಸಂಪರ್ಕ ವ್ಯವಸ್ಥೆಯ ಮರು ವ್ಯಾಖ್ಯಾನ ನಡೆಸುವುದು ಅಗತ್ಯವಾಗಿದೆ ಎಂದು ಭಾರತದ ನಾಲ್ವರು ಮಾಜಿ ಪ್ರಧಾನ ಮಂತ್ರಿಗಳ ವಾರ್ತಾ ಸಲಹೆಗಾರರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಸ್.ನರೇಂದ್ರ ಹೇಳಿದರು.
ಅವರು ಶುಕ್ರವಾರ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್ಸಿಐ) ಮಂಗಳೂರಲ್ಲಿ ಆಯೋಜಿಸಿದ ಎರಡು ದಿನಗಳ 18ನೇ ಗ್ಲೋಬಲ್ ಕಮ್ಯುನಿಕೇಶನ್ ಕಾನ್ಕ್ಲೇವ್ ನಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಾ, ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ದಿಮತ್ತೆಯ ಸವಾಲಿನ ನಡುವೆ ಕೃತಕ ಬುದ್ಧಿಮತ್ತೆ ಹಾಗೂ ಯಾಂತ್ರಿಕತೆಯ ಈ ಯುಗದಲ್ಲಿ ಎಲ್ಲವೂ ಸ್ವಯಂಚಾಲಿತವಾಗಿ ನಡೆಯುತ್ತದೆ ಎಂಬ ಭಾವನೆ ಇದೆ. ಗೂಗಲ್ ಹಾಗೂ ನಂತರದ ಡಿಜಿಟಲ್ ಮಾಧ್ಯಮ ಬೆಳವಣಿಗೆಯನ್ನು ಗಮನಿಸಿದಾಗ ಸಮಯದ ಪರಿಮಿತಿಯನ್ನೇ ಕಳೆಕೊಳ್ಳುತ್ತಿ ದ್ದೇವೆ ಎಂದು ಭಾಸವಾಗುತ್ತಿದೆ ಎಂದರು.
ಒಂದು ಅಧ್ಯಯನ ವರದಿಯ ಪ್ರಕಾರ ಕೆಲವು ವರ್ಷಗಳ ಹಿಂದೆ ಮನೆಯ ಹಿರಿಯರು ಕುಟುಂಬದ ಸದಸ್ಯರ ಜೊತೆ ಪ್ರತಿ ದಿನ ಸರಾಸರಿ 16 ಸಾವಿರ ಪದಗಳನ್ನು ಆಡುವ ಅವಕಾಶ ದೊರೆಯುತ್ತಿತ್ತು. ಆದರೆ ಈಚೆಗೆ ಅದು 5 ಸಾವಿರ ಪದಗಳಿಗೆ ಕುಸಿದಿದೆ. ತಂತ್ರಜ್ಞಾನವು ಈಚೆಗೆ ಮನುಷ್ಯನನ್ನು ತನ್ನ ದಾಸನನ್ನಾಗಿ ಮಾಡಿದೆ.ಈ ಸಂದಿಗ್ಧ ಪರಿಸ್ಥಿತಿಯಿಂದ ಬಿಡುಗಡೆ ಬೇಕಾಗಿದೆ ಎಂದರು.
ಸ್ಮಾರ್ಟ್ ಫೋನ್ ಕೇವಲ ಸಂಪರ್ಕ ಮಾಧ್ಯಮವಾಗಿ ಉಳಿದಿಲ್ಲ. ಅದು ವ್ಯಾವಹಾರಿಕ ಸಾಧನವಾಗಿ ನಮ್ಮ ಮೇಲೆ ಇನ್ನೊಬ್ಬರು ನಿಗಾ ಇಡಲು ಸಾಧ್ಯ ಇರುವ ಸಾಧನವಾಗಿದೆ ಎಂದರು.
ಸಮ್ಮೇಳನ ಉದ್ಘಾಟಿಸಿದ ಎಡಿ ಫ್ಯಾಕ್ಟರ್ಸ್ನ ವ್ಯವಸ್ಥಾಪಕ ನಿರ್ದೇಶಕ ಮದನ್ ಬೇಲ್, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗಿದ್ದು ವೇಗವಾಗಿ ಸಾಗುತ್ತಿದೆ. ಇಂಥ ಸಂದರ್ಭದಲ್ಲಿ ಮಾಧ್ಯಮ ಸಂವಹನವನ್ನು ಕಾಪಾಡಿಕೊಳ್ಳುವ ಅಗತ್ಯ ವಿದೆ ಎಂದರು.
ಸಮಾರಂಭದ ವೇದಿಕೆಯಲ್ಲಿಮೇಯರ್ ಮನೋಜ್ ಕುಮಾರ್ ಕೋಡಿಕಲ್, ನಿವೃತ್ತ ಐಎಎಸ್ ಅಧಿಕಾರಿ ಚಕ್ರವರ್ತಿ ಮೋಹನ್, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ಪೋಷಕ ಎಂ.ಬಿ. ಜಯರಾಮ್, ಸಮ್ಮೇಳನದ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಪಬ್ಲಿಕ್ ರಿಲೇಷನ್ ಆಫ್ ಇಂಡಿಯಾದ ಅಧ್ಯಕ್ಷೆ ಗೀತಾ ಶಂಕರ್, ವೈಸಿಸಿ ಮುಖ್ಯಸ್ಥೆ ಚಿನ್ಮಯಿ ಪ್ರವೀಣ್ ಉಪಸ್ಥಿತರಿದ್ದರು. ನಿಖಿಲ್ ನಿರೂಪಿಸಿದರು.