ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಮತ ಚಲಾಯಿಸುವ ಹಕ್ಕು ಕಾಯ್ದಿರಿಸಿ ನ್ಯಾಯಾಲಯ ಆದೇಶ
ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಿಗೆ ಮತದಾನದ ಹಕ್ಕು ನಿರಾಕರಣೆ ಪ್ರಕರಣ
ಮಂಗಳೂರು, ನ.9: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದ.ಕ. ಜಿಲ್ಲಾ ಶಾಖೆಯ 2024-2029ನೆ ಅವಧಿಯ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ಇಲಾಖೆಯ ಮತಕ್ಷೇತ್ರದಲ್ಲಿ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ನಾಯಕ್ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತ ಚಲಾಯಿಸುವ ಹಕ್ಕು ಕಾಯ್ದಿರಿಸಿ ನ್ಯಾಯಾಲಯ ಆದೇಶಿಸಿದೆ.
ಪ್ರಕಾಶ್ ನಾಯಕ್ರ ಹೆಸರು ಮತದಾರರ ಪಟ್ಟಿಯಲ್ಲಿದ್ದರೂ ಸಂಘ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಒಳಗಾಗಿರುವುದರಿಂದ ಮತದಾನ ಚಲಾಯಿಸಲು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುವುದಿಲ್ಲ ಎಂಬ ಷರಾವನ್ನು ಮತದಾರರ ಪಟ್ಟಿಯಲ್ಲಿ ನಮೂದಿಸಿ ಮತದಾನದ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ನಿರಾಕರಿಸಲಾಗಿತ್ತು. ಇದರ ವಿರುದ್ಧ ಪ್ರಕಾಶ್ ನಾಯಕ್ ಸಂಘದ ಅಧ್ಯಕ್ಷರಿಗೆ ಮತ್ತು ಚುನಾವಣಾಧಿಕಾರಿಗೆ ಸಲ್ಲಿಸಿದ ಮನವಿಗೆ ಯಾವುದೇ ಸ್ಪಂದನೆ ಸಿಗದ ಕಾರಣ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನೌಕರರ ಸಂಘದ ಪರವಾಗಿ ಕೆವಿಯಟ್ ಅರ್ಜಿ ಸಲ್ಲಿಸಲಾಗಿತ್ತು.
ಇತ್ತಂಡಗಳ ವಾದವನ್ನು ಆಲಿಸಿದ ನ್ಯಾಯಾಲಯವು ವಾದಿಯ ವಿರುದ್ಧ ಸಂಘದ ಬೈಲಾ ನಿಯಮಾನುಸಾರ ಶಿಸ್ತು ಕ್ರಮ ಕೈಗೊಂಡಿಲ್ಲ. ಆಡಳಿತ ಮತ್ತು ಶಿಸ್ತು ಸಮಿತಿಯ ಮುಂದೆ ಹಾಜರಾಗಲು ವಾದಿಗೆ ನೋಟೀಸ್ ಜಾರಿಯಾದ ದಾಖಲೆ ಹಾಜರುಪಡಿಸಿಲ್ಲ. ವಾದಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶ ನೀಡದೆ ಏಕಪಕ್ಷೀಯವಾಗಿ ಆದೇಶ ಹೊರಡಿಸುವುದು ನಿರಂಕುಶವಾವಾಗಿದೆ. ಚುನಾವಣಾ ಅಧಿಸೂಚನೆ ಪ್ರಕಾರ ಕರಡು ಮತ್ತು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸದಿ ರುವುದು, ಅಂತಿಮ ಮತದಾರರ ಪಟ್ಟಿಯನ್ನು ಕ್ಲಪ್ತ ಕಾಲದಲ್ಲಿ ಅನುಮೋದಿಸದಿರುವ ಅಂಶಗಳನ್ನು ಪರಿಗಣಿಸಿದಾಗ ಪ್ರತಿ ವಾದಿಗಳು ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಹಾಗೂ ನ್ಯಾಯ ಸಮ್ಮತವಾಗಿ ನಡೆಸದಿರುವುದು ಕಂಡು ಬರುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ನ.16ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ಪ್ರಕಾಶ್ ನಾಯಕ್ಗೆ ಅವಕಾಶ ನೀಡುವಂತೆ ನ್ಯಾಯಾಧೀಶ ರಾಮಲಿಂಗಪ್ಪಆದೇಶಿಸಿದ್ದಾರೆ. ಪ್ರಕಾಶ್ ನಾಯಕ್ ಪರವಾಗಿ ನ್ಯಾಯವಾದಿ ಅರವಿಂದ ವಿ. ವಾದಿಸಿದ್ದರು.