ಮೂಡುಬಿದಿರೆ| ಮಟ್ಕಾ ದಂಧೆ ವಿರುದ್ಧ ಕ್ರಮಕ್ಕೆ ಪುರಸಭಾ ಸಾಮಾನ್ಯ ಸಭೆಯಲ್ಲಿ ಒತ್ತಾಯ
ಮೂಡುಬಿದಿರೆ: ಮೂಡುಬಿದಿರೆ ಮತ್ತು ಕಾರ್ಕಳ ತಾಲೂಕು ವ್ಯಾಪ್ತಿಯ ಹಲವೆಡೆ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕೆಂದು ಪುರಸಭಾ ಸದಸ್ಯರು ಸಮಾನ್ಯ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ರಾಜೇಶ್ ನಾಯ್ಕ್ ಈ ಬಗ್ಗೆ ಪ್ರಸ್ತಾಪಿಸಿ ಮಾತನಾಡಿ, ಮೂಡುಬಿದಿರೆ ಪೇಟೆ, ಶಿರ್ತಾಡಿ ಸಹಿತ ಇತರ ಕಡೆಗಳಲ್ಲಿ ಕಚೇರಿಗಳನ್ನು ತೆರೆದುಕೊಂಡು ಅಕ್ರಮ ಕಾನೂನು ಬಾಹಿರ ಮಟ್ಕಾ ದಂಧೆ ನಡೆಯುತ್ತಿದೆ. ಈ ದಂಧೆಯಿಂದಾಗಿ ಈಗಾಗಲೇ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಿ ಸಾರ್ವಜನಿಕರ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿದರು. ಅವರ ಆಗ್ರಹಕ್ಕೆ ಉಳಿದ ಸದಸ್ಯರೂ ಧ್ವನಿಗೂಡಿಸಿದರು. ಮಟ್ಕಾ ದಂಧೆಯ ಅಡ್ಡೆಗಳ ಬಗ್ಗೆ ಮಾಹಿತಿ ನೀಡಿದರೆ ಕ್ರಮವಹಿಸಲಾಗುವುದು ಎಂದು ಮೂಡುಬಿದಿರೆ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದಪ್ಪ ಅವರು ಭರವಸೆ ನೀಡಿದರು.
ತಾಲೂಕಿನಲ್ಲಿ ಅಪ್ರಾಪ್ತ ಬಾಲಕರು ದ್ವಿಚಕ್ರ, ನಾಲು ಚಕ್ರಗಳ ವಾಹನಗನ್ನು ಚಲಾಯಿಸುತ್ತಿದ್ದಾರೆ. ಆದರೆ ಪೊಲೀಸ್ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಮೂಡುಬಿದಿರೆ ಬಸ್ಸು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಇನ್ನೂ ಸರಿಯಾಗಿಲ್ಲ, ಪುರಸಭಾ ವಾಣಿಜ್ಯ ಸಂಕೀರ್ಣದಲ್ಲಿರುವ ವ್ಯಾಪಾರಿಗಳಿಗೆ ಇದರಿಂದ ತುಂಬಾ ತೊಂದರೆಯಾಗುತ್ತದೆ, ಪುರಸಭೆಗೆ ಲಾಭ ಮಾಡಿ ಕೊಡುವ ಅಂಗಡಿ ವ್ಯಾಪಾರಸ್ಥರಿಗೆ ಅನ್ಯಾಯವಾದರೆ ಹೇಗೆ? ಎಂದು ಸದಸ್ಯರು ಸಭೆಯ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಇಂದು ಎಂ. ಅವರು ‘ಬಸ್ ನಿಲ್ದಾಣದಲ್ಲಿನ ಪಾರ್ಕಿಂಗ್ ಬಗ್ಗೆ ಈಹಿಂದೆಯೂ ಸಭೆ ನಡೆಸಲಾಗಿದೆ. ಅದರ ನಿರ್ಣಯಗಳು ಪರಿಣಾಕಾರಿಯಾಗಿಲ್ಲ. ಹಾಗಾಗಿ ಮೂಡುಬಿದಿರೆ ಪೊಲೀಸರು, ಪುರಸಭೆ, ಬಸ್ಸು ಮಾಲಕರು ಮತ್ತು ಏಜೆಂಟರ ಸಭೆ ನಡೆಸಲಾಗುವುದು’ ಎಂದರು.
ಆಹಾರ ಸುರಕ್ಷತೆಯ ದೃಷ್ಠಿಯಿಂದ ಫಾಸ್ಟ್ ಫುಡ್ ಅಂಗಡಿಗಳಿಗೆ ಆರೋಗ್ಯ ನಿರೀಕ್ಷಕರು ಭೇಟಿ ನೀಡಿ ವಿಚಾರಣೆ ನಡೆಸಿ ದ್ದಾರೆ. ಬೀದಿ ಬದಿಯ ವ್ಯಾಪಾರಿಗಳಿಗೆ ನಾವು ಸಾಲ ಕೊಡುತ್ತೇವೆ ಅಲ್ಲದೆ ಅವರಿಂದ ನಮಗೂ ಬಾಡಿಗೆ ಬರುತ್ತಿದೆ ಆದ್ದ ರಿಂದ ನಾವು ಅವರಿಗೆ ಸ್ಟಾಲ್ ಇಡಲು ಪೇಟೆಯ ಮೂರು ಕಡೆಗಳಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. ವ್ಯಾಪಾರ ಮಾಡಿ ಜೀವನ ಮಾಡುವವರಿಗೆ ನಾವು ತೊಂದರೆ ಮಾಡುವುದು ಬೇಡ ಎಂದು ಮುಖ್ಯಾಧಿಕಾರಿ ಸಭೆಯಲ್ಲಿ ಮನವಿ ಮಾಡಿದರು.
ಅಲ್ಲದೆ, ತಾಲೂಕಿನಲ್ಲಿ ಕೆಲವೆಡೆ ಟಿ.ಸಿ. ಕೆಳಗಡೆ ವ್ಯಾಪಾರ ನಡೆಸಲಾಗುತ್ತಿದೆ. ಬಟ್ಟೆಗಳನ್ನು ಒಣಗಿಸಲಾಗುತ್ತಿದೆ. ರಸ್ತೆ ಬದಿ ಕಳೆತುಂಬಿ ತುಳುಕುತ್ತಿದ್ದು, ಅದರ ಕಟಾವು ಮಾಡಿಲ್ಲ. ಪುರಸಭೆ ಕಟಾವು ಕೆಲಸ ಮಾಡದಿದ್ದರೆ, ಸದಸ್ಯರೇ ತಮ್ಮ ಸ್ವಂತ ಖರ್ಚಿನಲ್ಲೇ ಕಟಾವು ಮಾಡುತ್ತೇವೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಈ ವೇಳೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು. ಕುಡಿಯುವ ನೀರಿನ ಅಮೃತ್ ಜಲಜೀವನ್ ಯೋಜನೆಯ ಕಾಮಗಾರಿಗಳು ಆರಂಭವಾಗುವ ಮುನ್ನ ಕೌನ್ಸಿಲ್ ಗಮನಕ್ಕೆ ತರದೆ ಅಂತಿಮವಾಗಿ ಮಾಹಿತಿ ನೀಡಲು ಬಂದಿರುವ ಅಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು ಮತ್ತು ಈ ಬಗ್ಗೆ ವಿಷಯ ಚರ್ಚಿ ಸಲು ಅಧಿಕಾರಿಗಳನ್ನು ಕರೆದು ಮತ್ತೊಮ್ಮೆ ಸಭೆ ನಡೆಸುವುದೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಪಿ.ಕೆ. ಥೋಮಸ್, ಪುರಂದರ ದೇವಾಡಿಗ, ಜೊಸ್ಸಿ ಮೆನೇಜಸ್, ಸೌಮ್ಯ ಶೆಟ್ಟಿ, ದಿವ್ಯಾ ಜಗದೀಶ್, ರೂಪಾ ಶೆಟ್ಟಿ, ಹಿದಾಯಲ್ ಅಲಿ ಇಂಜಿನಿಯರ್, ಆರೋಗ್ಯ ನಿರೀಕ್ಷಕಿ ಹಾಗೂ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಪ್ರಸ್ತುತ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.