ಪರಶುರಾಮ ಥೀಮ್ ಪಾರ್ಕ್ ಬಗ್ಗೆ ತನಿಖೆಯಾಗಲಿ, ರಾಜಕೀಯ ಬೇಡ: ಸುನೀಲ್ ಕುಮಾರ್
ಉಡುಪಿ: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ನ ಪರಶುರಾಮ ಮೂರ್ತಿಗೆ ಸಂಬಂಧಿಸಿ ನಡೆಯುತ್ತಿರುವ ತನಿಖೆ ರಾಜಕೀಯವೇ ಹೊರತು ನಿಷ್ಪಕ್ಷಪಾತ ತನಿಖೆ ಅಲ್ಲ. ತನಿಖೆ ಬೇರೆಯೇ ದಿಕ್ಕಿನಲ್ಲಿ ಸಾಗುತ್ತಿದೆ. ಸರಕಾರ ಯಾವುದೇ ತನಿಖೆ ಮಾಡಲಿ. ಆದರೆ ತನಿಖೆಯಲ್ಲಿ ರಾಜಕೀಯ ಮಾಡ ಬಾರದು ಎಂದು ಮಾಜಿ ಸಚಿವ, ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ವಿನಾಕಾರಣ ವಿವಾದಗಳನ್ನು ಹುಟ್ಟು ಹಾಕಿ ಕಾರ್ಕಳದ ಪ್ರವಾಸೋದ್ಯಮದ ಕಗ್ಗೊಲೆ ಮಾಡಿದೆ. ಸೋಲಿನ ಹತಾಶೆಯಿಂದ ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಸೃಷ್ಠಿ ಮಾಡಲಾಗುತ್ತಿದೆ. ಥೀಂ ಪಾರ್ಕ್ಗೆ ಸರಕಾರ ೪.೫೦ಕೋಟಿ ರೂ. ಹಣ ಮಂಜೂರಾತಿ ಮಾಡಿದರೂ ಇನ್ನೂ ಬಿಡುಗಡೆ ಮಾಡಿಲ್ಲ. ಸರಕಾರದ ಯೋಜನೆಯೊಂದು ಜಿಲ್ಲಾಡಳಿತ ಅಥವಾ ಇಲಾಖೆಗೆ ಹಸ್ತಾಂತರ ಆಗುವ ಮೊದಲೇ ತನಿಖೆ ಮಾಡುವ ಪರಂಪರೆ ಉಡುಪಿಯಲ್ಲಿ ಆರಂಭವಾಗಿದೆ. ಆರೋಪ ಪ್ರತ್ಯಾರೋಪದಿಂದ ಕಾಮಗಾರಿ ಒಂದು ವರ್ಷ ವಿಳಂಬವಾಗಿದೆ. ಇದರಿಂದ ಪ್ರವಾಸೋದ್ಯಮ ಹಾಗೂ ಸರಕಾರ ದೊಡ್ಡ ನಷ್ಟವಾಗಿದೆ ಎಂದರು.
ಶಿಲ್ಪಿ ವಿನ್ಯಾಸ ಬದಲಿಸಲು ಅನುಮತಿ ಪಡೆದು ಮೂರ್ತಿಯನ್ನು ತೆರವು ಗೊಳಿಸಿದ್ದಾರೆ. ಪರಶುರಾಮ ಮೂರ್ತಿಯನ್ನು ಹೈಕೋರ್ಟ್ ಕಂಚು ಎಂದು ಹೇಳಿದ ಬಳಿಕ ಕಾಂಗ್ರೆಸ್ ಇದೀಗ ಫೈಬರ್ ಮೂರ್ತಿ ಎಂಬ ಆರೋಪವನ್ನು ಕೈಬಿಟ್ಟಿದೆ. ಮೂರ್ತಿಯ ಗುಣಮಟ್ಟ ಸೇರಿದಂತೆ ಯಾವುದೇ ತನಿಖೆಗೆ ನಾವು ಈಗಲೂ ಸಿದ್ಧರಿದ್ದೇವೆ. ಅದೇ ರೀತಿ ಪಾರ್ಕಿನ ಕಾಮಗಾರಿ ಕೂಡಲೇ ಮುಗಿಸಿ, ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳಬೇಕು. ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಈ ಕುರಿತು ಸುಳ್ಳು ಆರೋಪ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇದೀಗ ಜಿಲ್ಲಾ ಪೊಲೀಸ್ ಇಲಾಖೆ ಹೊಸ ಪರಂಪರೆ ಹುಟ್ಟುಹಾಕಿದೆ. ಅವ್ಯವಹಾರಕ್ಕೆ ಸಂಬಂಧಿಸಿ ಯಾವ ಇಲಾಖೆಯೂ ದೂರು ಕೊಟ್ಟಿಲ್ಲ. ಆದರೆ ಕಾಂಗ್ರೆಸ್ ಮುಖಂಡ ಖಾಸಗಿ ವ್ಯಕ್ತಿ ನೀಡಿದ ದೂರಿಗೆ ಪೊಲೀಸರು ಈ ಕುರಿತು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ರಾಜಕೀಯ ಹಸ್ತಕ್ಷೇಪದಿಂದ ಈ ಕೇಸು ದಾಖಲಾಗಿದೆ. ಈ ರೀತಿಯಾದರೆ ಮುಂದೆ ಸಾವಿರಾರು ಎಫ್ಐಆರ್ ದಾಖಲಾಗಬಹುದು ಎಂದು ಅವರು ಎಚ್ಚರಿಸಿದರು.
ಮೂರ್ತಿಯ ಮರು ವಿನ್ಯಾಸ ಮಾಡುವಂತೆ ಶಿಲ್ಪಿಯೇ ಜಿಲ್ಲಾಡಳಿತದಿಂದ ಅನುಮತಿ ಕೋರಿದ್ದರು. ಅದಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಅಲ್ಲಿನ ಮೂರ್ತಿಯನ್ನು ತೆರವುಗೊಳಿಸಲು ತಹಶೀಲ್ದಾರ್ ಪೊಲೀಸ್ ಭದ್ರತೆಯನ್ನು ಕೇಳಿದ್ದಾರೆ. ಹಾಗಾದರೆ ಪೊಲೀಸ್ ಭದ್ರತೆಯನ್ನು ಶಿಲ್ಪಿ ಮೂರ್ತಿಯನ್ನು ತೆರವು ಮಾಡಿದರೆ ಅದು ಕಳ್ಳತನ ಹೇಗಾಗುತ್ತದೆ ಎಂದು ಅವರು ಪ್ರಶ್ನಿಸಿದರು.
ಅಂದು ಮೂರ್ತಿ ತೆರವಿಗೆ ರಕ್ಷಣೆ ಕೊಟ್ಟ ಪೊಲೀಸರೇ, ಇಂದು ಈ ಪ್ರಕರಣದ ಕುರಿತು ತನಿಖೆ ಮಾಡುತ್ತಿದ್ದಾರೆ. ಒಟ್ಟಾರೆ ಈ ಪ್ರಕರಣವನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ನವರಿಗೆ ಕಲಾವಿದರ ಬಗ್ಗೆ ಯಾವುದೇ ಅನುಕಂಪ ಇಲ್ಲ. ಶಿಲ್ಪಿ ಜಿಎಸ್ಟಿ ಪಾವತಿಸದಿದ್ದರೆ ನಮ್ಮ ಸಮಸ್ಯೆ ಅಲ್ಲ. ನಮಗೆ ಟೆಂಡರ್ ಪ್ರಕಾರ ಕಾಮಗಾರಿ ಮಾಡಿಕೊಡಬೇಕು. 1.25 ಕೋಟಿ ರೂ. ಹಣ ಎಲ್ಲಿ ಹೋಯಿತು ಎಂದು ಕೇಳುವ ಕಾಂಗ್ರೆಸ್ನವರು, ಅವರದ್ದೇ ಸರಕಾರ ದಿಂದ ಪೂರ್ಣ ತನಿಖೆ ಮಾಡಿಸಲಿ ಎಂದು ಅವರು ಸವಾಲು ಹಾಕಿದರು.
ಅಜೆಕಾರು ಕೊಲೆ ಪ್ರಕರಣದ ಆರೋಪಿಗಳನ್ನು ಕೇವಲ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ ತೆಗೆದುಕೊಂಡ ಪೊಲೀಸರು, ಅಮಾಯಕ ಶಿಲ್ಪಿಯನ್ನು ಆರು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಅಷ್ಟು ದಿನ ಕಸ್ಟಡಿ ಪಡೆದು ಕೊಂಡು ಶಿಲ್ಪಿಯನ್ನು ಏನು ಮಾಡಲು ಹೊರಟಿದ್ದಾರೆ ಎಂದು ಶಾಸಕರು ಪ್ರಶ್ನಿಸಿದರು.
ಕ್ಷಮೆ ಕೇಳಬೇಕಾಗಿರುವುದು ನಾನಲ್ಲ. ಸುಳ್ಳು ಆರೋಪ ಮಾಡಿರುವ ಕಾಮಗಾರಿ ವಿಳಂಬ ಮಾಡುವಂತೆ ಮಾಡಿರುವ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಕ್ಷಮೆ ಮಾತ್ರವಲ್ಲ, ಪ್ರಾಯಃಶ್ಚಿತ್ತ ಕೂಡ ಪಡಬೇಕು ಎಂದರು.
‘ಥೀಮ್ ಪಾರ್ಕ್ ಪೂಜಾ ಕೇಂದ್ರ ಅಲ್ಲ’
ಪರಶುರಾಮ ಥೀಮ್ ಪಾರ್ಕ್ನಿಂದ ಧಾರ್ಮಿಕ ಭಾವನೆ ಧಕ್ಕೆಯಾಗಿದೆ ಎಂದು ಹೇಳುವ ಇವರಿಗೆ ಥೀಮ್ ಪಾರ್ಕ್ ಏನು ಎಂಬುದೇ ಗೊತ್ತಿಲ್ಲ. ಥೀಮ್ ಪಾರ್ಕ್ ಪೂಜಾ ಕೇಂದ್ರ ಅಲ್ಲ. ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಪೂಜಾ ಕೇಂದ್ರವೇ? ಥೀಮ್ ಪಾರ್ಕ್ ಪ್ರವಾಸೋದ್ಯಮ ಕೇಂದ್ರವಾಗಿದೆ. ಇಲ್ಲಿ ಪೂಜೆ ಮಾಡಲು, ಹಣ್ಣು ಕಾಯಿ ಒಡೆಯಲು ಅವಕಾಶ ಇಲ್ಲ ಎಂದು ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು.
ಮನೆಯಲ್ಲಿ ಯಾರು ಕುಳಿತುಕೊಳ್ಳಬೇಕು ಮತ್ತು ವಿಧಾನಸೌಧಕ್ಕೆ ಯಾರು ಹೋಗಬೇಕು ಎಂಬುದನ್ನು ಕಾರ್ಕಳದ ಜನ ತೀರ್ಮಾನಿಸಿದ್ದಾರೆ. ಹಾಗಾಗಿ ಉದಯ ಕುಮಾರ್ ಶೆಟ್ಟಿ ಮನೆಯಲ್ಲಿ ಕೂರಲು ಜನ ತೀರ್ಮಾನಿಸಿದ್ದಾರೆ. ಜೀವಂತ ಶವಯಾತ್ರೆ ಮಾಡಿದವರು ಈಗ ಅಮಾಯಕ ಶಿಲ್ಪಿಯ ಅನ್ನದ ತಟ್ಟೆಗೆ ಕಲ್ಲು ಹಾಕಿದ್ದಾರೆ ಎಂದು ಅವರು ಟೀಕಿಸಿದರು.