ದೇಶದ ಆರ್ಥಿಕ ಸ್ವಾವಲಂಬನೆಗೆ ಸಹಕಾರ ರಂಗದ ಕೊಡುಗೆ ಅಪಾರ: ಯು.ಟಿ.ಖಾದರ್
71ನೇ ಅಖಿಲ ಭಾರತ ಸಹಕಾರ ಸಪ್ತಾಹ “ವಿಕಸಿತ ಭಾರತ" ಸಹಕಾರಿಗಳ ಸಮಾವೇಶ
ಮಂಗಳೂರು: ದೇಶದ ಆರ್ಥಿಕ ಸ್ವಾವಲಂಬನೆಗೆ ಗ್ರಾಮೀಣ ಪ್ರದೇಶದ ಜನರು ಸ್ವಾಭಿಮಾನದಿಂದ ಬದುಕಲು ಸಹಕಾರ ರಂಗದ ಅಪಾರ ಕೊಡುಗೆ ನೀಡಿದೆ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಹೇಳಿದರು.
ಅವರು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ 71ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು “ವಿಕಸಿತ ಭಾರತ" ನಿರ್ಮಾಣದಲ್ಲಿ ಸಹಕಾರಸಂಸ್ಥೆಗಳ ಪಾತ್ರ ಎಂಬ ಧೈಯ ವಾಕ್ಯದೊಂದಿಗೆ ಆಚರಿಸ ಲಾಗುತ್ತಿರುವ ರಾಜ್ಯಮಟ್ಟದ ಸಹಕಾರ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ರಿ. ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್ಗಳು, ಎಲ್ಲಾ ವಿಧದ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯ ಸಹಯೋಗದೊಂದಿಗೆ “ಉದ್ಯಮ ಶೀಲತೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ” ಎಂಬ ವಿಷಯ ದೊಂದಿಗೆ ಹಮ್ಮಿಕೊಂಡ ಸಹಕಾರಿಗಳ ಸಮಾವೇಶದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಜನರು ಸ್ವಾಭಿಮಾನದಿಂದ ಬದುಕಲು ಸಹಕಾರ ರಂಗ ಪ್ರಮುಖ ಪಾತ್ರವಹಿಸಿದೆ. ದೇಶ ಸ್ವಾತಂತ್ರ್ಯ ಗಳಿಸಿದ ಸಂದರ್ಭದಲ್ಲಿ ದೇಶದ ಆರ್ಥಿಕ ಸಮಸ್ಯೆ, ಆಹಾರದ ಕೊರತೆಯ ನಡುವೆ ಸಹಕಾರಿ ರಂಗದ ಬೆಳವಣಿಗೆಗೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೂಲಕ ತಂದ ಹಸಿರು ಕ್ರಾಂತಿ ಆಹಾರ ಸಮಸ್ಯೆ ನೀಗಿಸಲು ಸಹಕಾರಿ ಯಾಗಿದೆ ಮತ್ತು ಹೊರದೇಶಗಳಿಗೆ ರಫ್ತು ಮಾಡುವ ಸ್ಥಿತಿಗೆ ತಲುಪಲು ಸಾಧ್ಯವಾಗಿದೆ. ಸಾಲ ಮೇಳದ ಮೂಲಕ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿ ಸಾಲ ಮೇಳದ ಮೂಲಕ ಬಡಜನರಿಗೆ ಬ್ಯಾಂಕ್ ನ ಬಾಗಿಲು ತೆರೆದು ಸಹಕಾರ ನೀಡಿದರು. ಅದೇ ರೀತಿಯ ಸಾಲ ಮೇಳ ದೇಶದಲ್ಲಿ ಮಗದೊಮ್ಮೆ ನಡೆಯ ಬೇಕಾದ ಅಗತ್ಯವಿದೆ ಎಂದರು.
ಕರಾವಳಿಯಲ್ಲಿ ಹೈನುಗಾರಿಕೆ ನಡೆಸುತ್ತಿರುವ ಹೈನುಗಾರರಿಗೆ ಉಳಿದ ಪ್ರದೇಶಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಯು.ಟಿ.ಖಾದರ್ ಸಲಹೆ ನೀಡಿದರು.
ಸಹಕಾರ ಸಪ್ತಾಹದ ಉದ್ಘಾಟನೆಯನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣರವರು ನೆರವೇರಿಸಿ ಮಾತನಾಡುತ್ತಾ, ಸಹಕಾರಿ ಚಳವಳಿ ಜನರ ಆಂದೋಲನ ವಾಗಬೇಕು.ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡ ಬೇಕು. ಹಳ್ಳಿಗಾಡಿನ ರೈತರಿಗೆ ಜನ ಸಾಮಾನ್ಯರಿಗೆ ಇನ್ನಷ್ಟು ಸಹಾಯ ನೀಡಲು ಸಹಕಾರ ಸಂಘಗಳು ಮುಂದಾಗಬೇಕು ಎಂದರು.
ಸಹಕಾರ ರಂಗ ಪಕ್ಷಾತೀತವಾಗಿ, ಜಾತ್ಯತೀತ ನೆಲೆಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲಿ ಇನ್ನಷ್ಟು ಬಲಿಷ್ಠ ವಾಗಿ ಸಹಕಾರ ರಂಗ ಬೆಳೆಯ ಬೇಕಾಗಿದೆ ದೇಶದ ಮಾಜಿ ಪ್ರಧಾನಿ ಜವಹರಲಾಲ ನೆಹರು ಅವರು ಪಂಚ ವಾರ್ಷಿಕ ಯೋಜನೆಗಳ ಮೂಲಕ ಸಹಕಾರ ರಂಗದ ಬೆಳವಣಿಗೆಗೆ ಅತೀ ಹೆಚ್ಚು ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಸಹಕಾರ ಇಲಾಖೆ ಯನ್ನು ಸ್ಥಾಪಿಸುವ ಮೂಲಕ ಅಮಿತ್ ಶಾ ಸಹಕಾರ ರಂಗದಲ್ಲಿ ಕಂಪ್ಯೂಟರ್ ವ್ಯವಸ್ಥೆ ವಿಸ್ತರಣೆ ಮಾಡುವಲ್ಲಿ ಸಹಕಾರ ನೀಡಿದ್ದಾರೆ ಎಂದರು.
“ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ”ವನ್ನು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ನೆರವೇರಿಸಿ ಮಾತನಾಡುತ್ತಾ, ವಾಣಿಜ್ಯ, ಕೃಷಿ, ಉದ್ಯಮ ಕ್ಷೇತ್ರದಲ್ಲಿ ಕ್ರಾಂತಿ ಕಾರಿ ಬದಲಾವಣೆಗೆ ಸಹಕಾರ ರಂಗ ಕಾರಣವಾಗಿದೆ. ಈ ರಂಗದ ಮೂಲಕ ಸಾಮಾನ್ಯ ಜನರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಸಹಕಾರ ರಂಗಕ್ಕೆ ನೆಹರೂ ಕಾಲದಿಂದಲೂ ಸಹಕಾರ ರಂಗಕ್ಕೆ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ. ರಾಜ್ಯದ ನಂದಿನಿ ಬ್ರ್ಯಾಂಡ್ ಬೆಳೆದಿದೆ. ಸಹಕಾರ ರಂಗದ ಸಾಧನೆಯಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಹಾಲು ನೀಡಲು ಸಾಧ್ಯವಾಗಿದೆ. ಸಹಕಾರಿ ರಂಗದ ಸ್ವ ಸಹಾಯ ಗುಂಪುಗಳ ಮೂಲಕ ಮಹಿಳೆಯರು ಸೇರಿದಂತೆ ಸಮಾಜದ ಬದಲಾವಣೆ ಸಾಧ್ಯವಾಗಿದೆ. ದ್ಷೇಷ ಇಲ್ಲದೆ ಪರಸ್ಪರ ನಂಬಿಕೆ ವಿಶ್ವಾಸ ದೊಂದಿಗೆ ಸಹಕಾರ ರಂಗ ಎಲ್ಲರನ್ನೂ ಒಟ್ಟುಗೂಡಿಸಿ ಸಾಗುತ್ತಿದೆ ಎಂದು ಶುಭ ಹಾರೈಸಿದರು.
ಶತಮಾನೋತ್ಸವ ಪೂರೈಸಿದ ಸಹಕಾರ ಸಂಘಗಳಿಗೆ ಪುರಸ್ಕಾರ"ವನ್ನು ಶಾಸಕರು ಹಾಗೂ ಕರ್ನಾಟಕ ಸರಕಾರದ ಮಾಜಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಮಾತನಾಡುತ್ತಾ,ಉದ್ಯೋಗ ಸೃಷ್ಟಿ,ಉದ್ಯಮ ಶೀಲತೆಯಲ್ಲಿ ಸಹಕಾರ ರಂಗ ಪ್ರಮುಖ ಕೊಡುಗೆ ನೀಡಿದೆ.ಸಕ್ಕರೆ ಕಾರ್ಖಾನೆ ಮತ್ತು ಸಕ್ಕರೆ ಉತ್ಪಾದನೆ ರಾಜ್ಯದಲ್ಲಿ ಬೆಳೆಯಲು ಸಹಕಾರ ರಂಗದ ಕೊಡುಗೆ ಅಪಾರ ಇದೆ ವಿಶೇಷ ವಾಗಿ ವಿದ್ಯುತ್ ಸರಬರಾಜು ಮಾಡುವ ಸಹಕಾರ ಸಂಸ್ಥೆ ಬೆಳಗಾವಿಯ ಹುಕ್ಕೇರಿ ಯಲ್ಲಿದೆ.ಈ ರೀತಿ ಸಹಕಾರ ರಂಗದ ಕೊಡುಗೆ ವಿವಿಧ ಕ್ಷೇತ್ರ ಗಳಲ್ಲಿ ವಿಸ್ತರಿಸಿ ಕೊಂಡಿದೆ ಎಂದರು.
*ಉತ್ತಮ ಸ್ವ-ಸಹಾಯ ಸಂಘಗಳಿಗೆ ಪುರಸ್ಕಾರವನ್ನು ಶಾಸಕರು ಹಾಗೂ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರಾದ ಜಿ.ಟಿ. ದೇವೇಗೌಡ ಇವರು ನೆರವೇರಿಸಿ ಮಾತನಾಡುತ್ತಾ, ಸಹಕಾರ ರಂಗ ನಬಾರ್ಡ್ ಸಾಲವನ್ನು ಕಡಿತ ಮಾಡುತ್ತಾ ಬಂದಿರುವ ಕಾರಣ ಕೆಟ್ಟ ಪರಿಣಾಮ ಎದುರಿಸಬೇಕಾಗಿದೆ. ಕೇಂದ್ರ ಸರಕಾರ ನಬಾರ್ಡ್ ಸಹಕಾರಿ ರಂಗಕ್ಕೆ ಹೆಚ್ಚಿನ ರಿಯಾಯಿತಿ ಸಹಕಾರ ನೀಡಬೇಕು ಎಂದರು. ಸಹಕಾರ ರಂಗಕ್ಕೆ ಉತ್ತಮ ನಾಯಕತ್ವ ಮುಖ್ಯ ದಕ್ಷಿಣ ಕನ್ನಡ ಜಿಲ್ಲೆ ರಾಜೇಂದ್ರ ಕುಮಾರ್ ಅವರ ನಾಯಕತ್ವದಲ್ಲಿ ಸಹಕಾರ ರಂಗ ಮಾದರಿಯಾಗಿ ಮುಂದು ವರಿಯುತ್ತಿರುವುದು ಶ್ಲಾಘನೀಯ ಎಂದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಮಂಗಳೂರು ಇದರ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡುತ್ತಾ, ಸಹಕಾರಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಸಹಕಾರ ರಂಗ ಬೆಳೆಯಲು ಇಲ್ಲಿರುವ ಪ್ರತಿಯೊಬ್ಬ ಸಹಕಾರ ಸಂಘದ ಸದಸ್ಯರು ಕಾರಣ,ರಾಜ್ಯಮಟ್ಟದ ಸಹಕಾರ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಜಾಥವನ್ನು ಯಶಸ್ಸು ಗೊಳಿಸಲು ಶ್ರಮಿಸುವ ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ಸಹಕಾರಿ ಗಳಿಗೆ ರಾಜೇಂದ್ರ ಕುಮಾರ್ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಭರತ್ ಶೆಟ್ಟಿ ವೈ, ಶಾಸಕರು ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳ ನಿ, ಮಂಗಳೂರು ಇದರ ಅಧ್ಯಕ್ಷರಾದ ಯಶ್ಪಾಲ್ ಎ. ಸುವರ್ಣ, ನಬಾರ್ಡ್ ಬೆಂಗಳೂರು ಇದರ ಮುಖ್ಯ ಮಹಾಪ್ರಬಂಧಕರಾದ ಕೆ.ವಿ.ಎಸ್. ಎಸ್.ಎಲ್.ವಿ.ಪ್ರಸಾದ್ ರಾವ್, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು ಇದರ ಅಧ್ಯಕ್ಷರಾದ ಕೆ. ಪಿ. ಸುಚರಿತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಹಕಾರ ಸಂಘಗಳ ಅಪರ ನಿಬಂಧಕಕೆ.ಎಸ್.ನವೀನ್, ಕರ್ನಾಟಕ ರಾಜ್ಯ ಮಾರಾಟ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಗುರುಸ್ವಾಮಿ, ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ, ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್ ಎಸ್ ಸಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯಕು ಮಾರ್ ಸೂರಿಂಜೆ, ಉಭಯ ಜಿಲ್ಲೆಗಳ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರುಗಳಾದ ಜಯಕರ ಶೆಟ್ಟಿ ಇಂದ್ರಾಳಿ, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಬ್ಯಾಂಕಿನ ನಿರ್ದೇಶಕ ರುಗಳಾದ ಶಶಿಕುಮಾರ್ ರೈ ಬಿ., ಎಸ್. ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಪಿ. ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಎಸ್. ರಾಜು ಪೂಜಾರಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್ ,ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಲಾವಣ್ಯ ಕೆ ಆರ್ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿ ರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು.
ಸಹಕಾರ ಸಪ್ತಾಹದ ಅಂಗವಾಗಿ "ಸಹಕಾರ ಜಾಥಾ" ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆವರಣದಿಂದ ಕರಾವಳಿ ಉತ್ಸವ ಮೈದಾನದವರೆಗೆ ಸಾಂಸ್ಕೃತಿಕ ಕಲಾ ಪ್ರಕಾರಗಳ ಹಾಗೂ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ 30ಕ್ಕೂ ಅಧಿಕ ವಿವಿಧ ಟ್ಯಾಬ್ಲೊ ಗಳೊಂದಿಗೆ ನಡೆಯಿತು.
ಸಹಕಾರ ಸಪ್ತಾಹದ ಅಂಗವಾಗಿ ವಸ್ತು ಪ್ರದರ್ಶನ ಮಳಿಗೆಗಳನ್ನು ಆಯೋಜಿ ಸಲಾಗಿತ್ತು. ಕೆಎಂಎಫ್ ವತಿಯಿಂದ ನಂದಿನಿ ಪ್ರೀಮಿಯಂ ಮೊಸರು ಬ್ರ್ಯಾಂಡ್ ಬಿಡುಗಡೆ ಮಾಡಲಾಯಿತು. ಚೈತ್ರಾ ಮತ್ತು ದಿವ್ಯಾರಾಣಿ ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಸಹಕಾರ ಮಾಣಿಕ್ಯ ಪ್ರಶಸ್ತಿ"ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂಡಬಿದ್ರೆಸೇವಾ ಸಹಕಾರಿ ಸಂಘ ನಿ, ಮೂಡಬಿದ್ರೆ , ಉಡುಪಿ ಜಿಲ್ಲೆಯಿಂದ ಪಡುಬಿದ್ರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಪಡುಬಿದ್ರೆ ಹಾಗೂ ಕ್ರೆಡಿಟ್ ಕೋ-ಅಪರೇಟಿವ್ ಸಹಕಾರ ಸಂಘದಿಂದ ಮಂಗಳೂರಿನ ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಗೆ ನೀಡಲಾಯಿತು.