ಜ್ಞಾನದ ವಿಸ್ತರಣೆಯೊಂದಿಗೆ ಸಮಾಜವನ್ನು ಬೆಳೆಸೋಣ: ಡಾ. ಆರ್ತಿ ಸರಿನ್
ನಿಟ್ಟೆ ವಿಶ್ವವಿದ್ಯಾನಿಲಯದ ಹದಿನಾಲ್ಕನೆಯ ಘಟಿಕೋತ್ಸವ
ಕೊಣಾಜೆ: ಮಾನವ ಜನಾಂಗದ ಅಭಿವೃದ್ಧಿಯು ನಮ್ಮಲ್ಲಿನ ಮೌಲ್ಯಗಳ ಉಳಿವು ಮತ್ತು ಬಳಕೆಯ ಮೇಲೆ ಅವಲಂಬಿತ ವಾಗಿರುತ್ತದೆ. ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು, ಜ್ಞಾನವನ್ನು ಸದಾಕಾಲ ವಿಸ್ತರಿಸಿಕೊಂಡು, ತಾವೂ ಬೆಳೆಯುತ್ತ, ಸಮಾಜವನ್ನೂ ಬೆಳೆಸುವ ಕಾರ್ಯದಲ್ಲಿ ನಿರತರಾಗಿರಬೇಕು ಎಂದು ಎಂದು ಸೇನಾಪಡೆಗಳ ವೈದ್ಯಕೀಯ ಸೇವೆಗಳ ಡೈರೆಕ್ಟರ್ ಜನರಲ್ ಡಾ. ಆರ್ತಿ ಸರಿನ್ ಹೇಳಿದರು.
ಅವರು ಶನಿವಾರ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ನಿಟ್ಟೆ ಮೈದಾನದಲ್ಲಿ ನಡೆದ ನಿಟ್ಟೆ ವಿಶ್ವವಿದ್ಯಾನಿಲಯದ ಹದಿನಾಲ್ಕನೆಯ ಘಟಿಕೋತ್ಸವ ಸಮಾರಂಭದಲ್ಲಿ ಅವರು ಘಟಿಕೋತ್ಸವ ಸಂದೇಶ ನೀಡಿದರು.
ದೇಶದ ಅಭಿವೃದ್ಧಿಯ ಚುಕ್ಕಾಣಿಯು ವಿದ್ಯಾವಂತ ಯುವಕರ ಕೈಯಲ್ಲಿ ಇರುತ್ತದೆ. ಯುವಕರು ತಾವು ಗಳಿಸುವ ಪದವಿ ಗಳನ್ನು ಬಳಸಿಕೊಂಡು ದೇಶ ಕಟ್ಟುವ ಕೆಲಸವನ್ನು ಮಾಡಬೇಕು. ಇದರ ಜೊತೆ ಜೊತೆಗೆ ದೇಶದ ಸಾಂಪ್ರದಾಯಿಕ ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಬೇಕು. ಅದರಿಂದ ಮಾತ್ರವೇ ಪದವೀಧರರು ತಮ್ಮ ನಾಗರಿಕ ಕರ್ತವ್ಯವನ್ನು ಸಮರ್ಥವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ನಾವು ಸಂಪಾದಿಸುವ ಪ್ರತಿಭೆಯನ್ನು ಸಮಾಜದ ಏಳ್ಗೆಗೆ ಬಳಸಿದಾಗ ಮಾನವ ಜನಾಂಗದ ಸರ್ವಾಂಗೀಣ ಅಭಿವೃದ್ಧಿಯಾ ಗುತ್ತದೆ. ಅದು ಶಿಕ್ಷಣದ ಪ್ರಮುಖ ಆಶಯಗಳಲ್ಲಿ ಒಂದಾಗಿದೆ. ಜೀವನವು ಸಾಕಷ್ಟು ಸವಾಲುಗಳನ್ನು ನಮಗೆ ಒಡ್ಡುತ್ತಿರು ತ್ತದೆ. ಗೆಲವು – ಸೋಲುಗಳು ಸಾಮಾನ್ಯ. ಆದರೆ, ಆತ್ಮಶಕ್ತಿಯ ಮೇಲೆ ನಂಬಿಕೆ ಇರಿಸಿ ಎತ್ತರಕ್ಕೆ ಬೆಳೆಯುವ ಪ್ರಯತ್ನ ದಲ್ಲಿ ಸದಾಕಾಲ ನಿರತರಾಗಿರಬೇಕು. ಜೀವನದಲ್ಲಿ ಸಿಗುವ ಅವಕಾಶಗಳನ್ನು ವೈಯಕ್ತಿಯ ಅಭಿವೃದ್ಧಿ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ನಿಟ್ಟೆ ವಿಶ್ವವಿದ್ಯಾನಿಲಯವು ಅತ್ಯುತ್ತಮ ಶೈಕ್ಷಣಿಕ ವಾತಾವರಣವನ್ನು ಯುವ ಜನಾಂಗಕ್ಕೆ ನೀಡುತ್ತಿದೆ. ಇದು ಎಲ್ಲ ಸೇವೆಗಳಿಗೂ ಹಿರಿದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ ಅವರು, ನಿಟ್ಟೆ ವಿಶ್ವವಿದ್ಯಾನಿಲಯವು ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ ಮೂಲಕ ‘A+’ ಶ್ರೇಣಿಯನ್ನು ಪಡೆದಿದೆ ಮತ್ತು ಭಾರತದ 1100 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಪೈಕಿ ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರಾಂಕಿಂಗ್ ಫ್ರೇಮ್ವರ್ಕ್ (NIRF) ನಲ್ಲಿ 66ನೇ ಸ್ಥಾನವನ್ನು ಹೊಂದಿದೆ. ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದೇಶದಲ್ಲಿ 6ನೇ ಸ್ಥಾನ, ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧವಿಜ್ಞಾನ ಸಂಸ್ಥೆಗೆ 41ನೇ ಸ್ಥಾನ ಲಭಿಸಿದೆ. ಇದಲ್ಲದೇ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ವಿಶ್ವವಿದ್ಯಾನಿಲಯವು ಶ್ರೇಷ್ಠ ಸ್ಥಾನಗಳನ್ನು ಪಡೆಯುತ್ತ ಅಭಿವೃದ್ಧಿಯ ಪಥದಲ್ಲಿ ಸಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಎನ್. ವಿನಯ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯ ಕ್ರಮದಲ್ಲಿ ಸಹಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಂ ಶೆಟ್ಟಿ, ಸಹ ಕುಲಾಧಿಪತಿ (ಆಡಳಿತ) ವಿಶಾಲ್ ಹೆಗ್ಡೆ , ವಿಶ್ವ ವಿದ್ಯಾನಿಲಯದ ಕುಲಸಚಿವರಾದ ಪ್ರೊ. ಡಾ. ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕರಾದ ಪ್ರೊ. ಡಾ. ಪ್ರಸಾದ್ ಬಿ. ಶೆಟ್ಟಿ ಹಾಗೂ ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳ ಮುಖ್ಯಸ್ಥರು ಮತ್ತು ಕಾರ್ಯಕಾರಿ ಮಂಡಳಿ ಹಾಗೂ ಶೈಕ್ಷಣಿಕ ಸಮಿತಿ ಸದಸ್ಯರು ಭಾಗವಹಿಸಿದ್ದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ ಸ್ವಾಗತಿಸಿದರು. ಆರ್ಥೋಪೆಡಿಕ್ ಸರ್ಜನ್ ಡಾ.ಸಿದ್ಧಾರ್ಥ್ ಮತ್ತು ಸ್ಪೀಚ್ ಆಂಡ್ ಹಿಯರಿಂಗ್ ವಿಭಾಗದ ಪ್ರೊಫೆಸರ್ ಕು.ಅಖಿಲ ನಿರೂಪಿಸಿದರು.
ಪದವಿ ಪ್ರದಾನ
ಸಮಾರಂಭದಲ್ಲಿ ಒಟ್ಟು 1052 ವಿದ್ಯಾರ್ಥಿಗಳು ಪದವಿ ಪಡೆದರು. ಪಿಹೆಚ್.ಡಿ-34, ವೈದ್ಯಕೀಯ-163 (ಪಿಜಿ-15+ಯುಜಿ-148), ದಂತ ವೈದ್ಯಕೀಯ-147 (ಫೆಲೋಶಿಪ್-1+ಪಿಜಿ-49+ಯುಜಿ-97), ಫಾರ್ಮಸಿ-209 (ಪಿಜಿ-107+ಯುಜಿ-102), ನರ್ಸಿಂಗ್-143 (ಪಿಜಿ-05+ಯುಜಿ-138), ಫಿಸಿಯೋಥೆರಪಿ-85 (ಪಿಜಿ-30+ಯುಜಿ-55), ಅರೆ ವೈದ್ಯಕೀಯ ವಿಜ್ಞಾನ -146 (ಪಿಜಿ-42+ಯುಜಿ-104), ಮಾನವಿಕ-14 (ಪಿಜಿ-11+ ಯುಜಿ-03), ಜೈವಿಕ ವಿಜ್ಞಾನ -49 (ಪಿಜಿ-45 +ಯುಜಿ-04), ವಾಸ್ತುಶಿಲ್ಪ -41 (ಯುಜಿ), ವಾಕ್ ಮತ್ತು ಶ್ರವಣ -15 (ಪಿಜಿ) ಮತ್ತು ವ್ಯವಹಾರ ನಿರ್ವಹಣೆ -06 (ಪಿಜಿ-06) ಪದವಿ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವತಿಯಿಂದ 22 ಚಿನ್ನದ ಪದಕಗಳು ಹಾಗೂ 72 ಮೆರಿಟ್ ಪ್ರಮಾಣಪತ್ರಗಳನ್ನು, ಪ್ರಶಸ್ತಿಗಳನ್ನು ವಿತರಿಸಲಾಯಿತು.