ಒಂದಾಗಿ ಕೈ ಜೋಡಿಸಿದರೆ ಸಾಧನೆ ಸಾಧ್ಯ: ಪ್ರೊ. ಪಿ.ಎಲ್. ಧರ್ಮ
► ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಚಾಲನೆ ►ರಾಷ್ಟ್ರೀಯ ಮಟ್ಟದ ಅಂತರ್ ವಿವಿ ಕ್ರಾಸ್ಕಂಟ್ರಿ ಚಾಂಪಿಯನ್ ಶಿಪ್ ಸಮಾರೋಪ
ಉಪ್ಪಿನಂಗಡಿ: ತೀರಾ ಗ್ರಾಮೀಣ ಪ್ರದೇಶವಾಗಿರುವ ಉಪ್ಪಿನಂಗಡಿಯಲ್ಲಿ, ಅದರಲ್ಲೂ ಸರಕಾರಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟವೊಂದು ಯಶಸ್ವಿಯಾಗಿ ನಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ಎಲ್ಲರೂ ಒಂದಾಗಿ ಕೈಜೋಡಿ ಸಿದರೆ ಏನನ್ನೂ ಮಾಡಲು ಸಾಧ್ಯವಿದೆ ಎಂದು ಮಂಗಳೂರು ವಿವಿ ಉಪ ಕುಲಪತಿ ಪಿ.ಎಲ್. ಧರ್ಮ ಹೇಳಿದರು.
ನ. 19ರಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಂತರ್ ವಿವಿ ಹುಡುಗರ ಕ್ರಾಸ್ಕಂಟ್ರಿ ಚಾಂಪಿಯನ್ ಶಿಪ್-2024ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಈ ಕ್ರೀಡಾಕೂಟ ಕೇವಲ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಕೂಟ ಅಲ್ಲ. ಊರ ಮಂದಿ ಎಲ್ಲರೂ ಒಂದಾಗಿ ಸೇರಿ ಮಾಡಿದ ಶ್ರಮದ ದ್ಯೋತಕ ವಾಗಿ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿದೆ. ಇದರ ಹಿಂದೆ ಕೆಲಸ ಮಾಡಿದ ಎಲ್ಲರಿಗೂ ಮಂಗಳೂರು ವಿಶ್ವವಿದ್ಯಾನಿಲಯ ಅಭಾರಿ ಆಗಿರುವುದಾಗಿ ತಿಳಿಸಿದರು.
ಪುತ್ತೂರು ಉಪ ವಿಭಾಗದ ಉಪವಿಭಾಗಾಧಿಕಾರಿ ಜುಬಿನ್ ಮಹೋಪಾತ್ರ ಮಾತನಾಡಿ, ಗ್ರಾಮೀಣ ಪ್ರದೇಶವಾಗಿರುವ ಉಪ್ಪಿನಂಗಡಿಯಂತಹ ಗ್ರಾಮದಲ್ಲಿರುವ ಸರಕಾರಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟ ನಡೆದಿರುವುದು ಐತಿಹಾಸಿಕ ದಾಖಲೆಯಾಗಿದೆ. ಇದಕ್ಕೆ ಬಹಳಷ್ಟು ಶ್ರಮ ಪಡಬೇಕಾಗುತ್ತದೆ, ಇಲ್ಲಿ ಸರಕಾರ ಮತ್ತು ಸಾರ್ವಜನಿಕರು ಪರಸ್ಪರ ಒಂದಾಗಿ ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ, ಹುಲಿ ವೇಷ, ಕೆಸರು ಗದ್ದೆ ದೈಹಿಕ ಕ್ಷಮತೆ ನೀಡುವ ಕ್ರೀಡೆಗಳಿದ್ದು, ಇಲ್ಲಿನ ಸಂಸ್ಕøತಿ ಶ್ರೀಮಂತವಾಗಿದೆ. ಇಲ್ಲಿನ ನೆಲದ ಮಹಿಮೆಯೇ ಈ ರೀತಿಯ ಸಾಧನೆಯನ್ನು ಯಶಸ್ವಿಗೊಳಿಸುತ್ತದೆ ಎಂದರು.
ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ಕ್ರೀಡೆಯ ಮೂಲಕ ದೇಶಕ್ಕೆ ಶಕ್ತಿ ನೀಡುವ ಕೆಲಸವಾಗಬೇಕು. ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಮುಂದಿನ ಗುರಿಯತ್ತ ಮುನ್ನುಗುವ ಛಲ ನಮ್ಮದಾಗಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಇಂತಹ ಕ್ರೀಡಾಕೂಟ ದಿಂದ ಹುಟ್ಟಿ ಬರಬೇಕು ಎಂದರು.
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಕ್ರೀಡಾಕೂಟ ಯಶಸ್ವಿಯಾಗಿ ನಡೆದಿರುವುದಕ್ಕೆ ಹೆಮ್ಮೆ ಇದೆ, ಇಲ್ಲಿನ ಜನತೆ, ಅಧಿಕಾರಿಗಳು ಬಹಳ ಸಹಕಾರ ನೀಡಿದ್ದು, ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕ್ರೀಡಾಕೂಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ, ಈ ಕ್ರೀಡೆಯ ಮೂಲಕ ಇಂದು ಇಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಣ್ತುಂಬಿಕೊಂಡಿದ್ದೇವೆ. ಜಾತಿ, ಧರ್ಮ, ರಾಜಕೀಯ ಬೇಧಗಳನ್ನು ಮರೆತು ಎಲ್ಲರೂ ಒಗ್ಗೂಡಿ ಶ್ರಮಿಸಿದ್ದರಿಂದಲೇ ಇಂದು ಈ ಕ್ರೀಡಾಕೂಟ ಯಶಸ್ವಿಯಾಗಲು ಕಾರಣವಾಗಿದೆ ಎಂದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಲಿತ, ಮಂಗಳೂರು ವಿಶ್ವವಿದ್ಯಾನಿಲಯದ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ, ಕಿಶೋರ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಎ. ಕೃಷ್ಣರಾವ್ ಅರ್ತಿಲ, ಅಶ್ರಫ್ ಬಸ್ತಿಕ್ಕಾರ್, ವಿನ್ಸೆಂಟ್ ಫೆರ್ನಾಂಡಿಸ್, ಮಹಾಲಿಂಗೇಶ್ವರ ಭಟ್, ಶಾಂಭವಿ ರೈ, ಇಸ್ಮಾಯಿಲ್ ಇಕ್ಬಾಲ್, ಯು.ಟಿ. ತೌಸೀಫ್, ಶಬ್ಬೀರ್ ಕೆಂಪಿ, ನಝೀರ್ ಮಠ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕಾರ್, ಸದಸ್ಯರಾದ ಅನಿ ಮಿನೇಜಸ್, ಆದಂ ಕೊಪ್ಪಳ, ಜಾನ್ ಕೆನ್ಯೂಟ್, ಪ್ರಾಂಶುಪಾಲರಾದ ಇಬ್ರಾಹೀಂ, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಸುರೇಶ್ ಅತ್ರೆಮಜಲು, ಧನಂಜಯ ನಟ್ಟಿಬೈಲು, ಇಬ್ರಾಹೀಂ ಕೆ., ಅಬ್ದುಲ್ ರಶೀದ್, ಮೈಸೀದ್ ಇಬ್ರಾಹೀಂ, ಸಣ್ಣಣ್ಣ, ಲೊಕೇಶ್ ಬೆತ್ತೋಡಿ, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಪ್ರಮುಖರಾದ ಅಶ್ರಫ್ ಬಸ್ತಿಕ್ಕಾರ್, ಕಂಗ್ವೆ ವಿಶ್ವನಾಥ ಶೆಟ್ಟಿ, ರವೀಂದ್ರ ದರ್ಬೆ, ವಿದ್ಯಾಧರ ಜೈನ್, ಚಂದಪ್ಪ ಮೂಲ್ಯ, ಉಮೇಶ್ ಶೆಣೈ, ಸತೀಶ್ ಶೆಟ್ಟಿ ಹೆನ್ನಾಳ, ಸುನೀಲ್ ಕುಮಾರ್ ದಡ್ಡು, ರಾಧಾಕೃಷ್ಣ ನಾಯಕ್, ಉಮಾನಾಥ ಶೆಟ್ಟಿ ಪೆರ್ನೆ, ಎಂ.ಎಸ್. ಮುಹಮ್ಮದ್, ಪ್ರವೀಣ್ ಚಂದ್ರ ಆಳ್ವ, ಎಂ.ಬಿ. ವಿಶ್ವನಾಥ ರೈ, ಚಿದಾನಂದ ಪಂಚೇರು, ವಿಕ್ರಂ ಶೆಟ್ಟಿ ಅಂತರ, ಪ್ರೊ. ಸುಬ್ಬಪ್ಪ ಕೈಕಂಬ, ಮುರಳೀಧರ ರೈ ಮಠಂತಬೆಟ್ಟು, ಮುಹಮ್ಮದ್ ಬಡಗನ್ನೂರು, ಸಿದ್ದೀಕ್ ಕೆಂಪಿ, ಕೈಲಾರು ರಾಜಗೋಪಾಲ ಭಟ್, ರಫೀಕ್ ಉಪ್ಪಿನಂಗಡಿ, ವಿಜೇತ್ ಕುಮಾರ್, ಝಕಾರಿಯಾ ಕೊಡಿಪ್ಪಾಡಿ, ಯು.ಟಿ. ಇರ್ಷಾದ್, ಗೀತಾ ದಾಸರಮೂಲೆ, ಸವಿತಾ ಹರೀಶ್, ಚಂದ್ರಶೇಖರ ಮಡಿವಾಳ, ಜಯಂತ ಪೊರೋಳಿ, ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜಾ ಸ್ವಾಗತಿಸಿದರು. ಉಪ್ಪಿನಂಗಡಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ವಂದಿಸಿದರು. ಮುತ್ತು ಹಾಗೂ ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿಂದ ಕ್ರೀಡಾ ಜ್ಯೋತಿ ಹಾಗೂ ಟ್ರೋಫಿಯನ್ನು ಮೆರವಣಿಗೆಯಲ್ಲಿ ಕಾಲೇಜು ಕ್ರೀಡಾಂಗಣಕ್ಕೆ ಕೊಂಡಯ್ಯಲಾಯಿತು. ಮೆರವಣಿಗೆ ಯಲ್ಲಿ ಚೆಂಡೆ, ಬ್ಯಾಂಡ್, ವಾಲಗದೊಂದಿಗೆ ಹುಲಿ ವೇಷ, ಗೊಂಬೆ ಕುಣಿತ, ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ಆಕರ್ಷಣೀಯವಾಗಿತ್ತು. ಕಾಲೇಜು ಮುಂಭಾಗದಲ್ಲಿ ಸೆಟ್ ಸಾರಿಯುಟ್ಟು ಪೂರ್ಣ ಕುಂಭ ಕಲಶದೊಂದಿಗೆ ಕಾಲೇಜು ವಿದ್ಯಾರ್ಥಿನಿಯರು ಮೆರವಣಿಗೆಯನ್ನು ಸ್ವಾಗತಿಸಿ, ಕಾಲೇಜು ಕ್ಯಾಂಪಸ್ನೊಳಗೆ ಕರೆದುಕೊಂಡು ಹೋದರು.
ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಚಾಲನೆ
ಅಪರಾಹ್ನ 4ಕ್ಕೆ ಸರಿಯಾಗಿ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಚಾಂಪಿಯನ್ಶಿಪ್ಗೆ ಚಾಲನೆ ನೀಡಿ, ಶುಭ ಹಾರೈಸಿದರು. ಕಾಲೇಜು ಮೈದಾನದಿಂದ ಓಡಿದ ಕ್ರೀಡಾಪಟುಗಳು, ಹೆದ್ದಾರಿಯಲ್ಲಿ ಬಲಕ್ಕೆ ತಿರುಗಿ ಗಾಂಧಿಪಾರ್ಕ್ ಮೂಲಕ ಬಸ್ ನಿಲ್ದಾಣದಲ್ಲಿ ತಿರುವು ಪಡೆದು, ಬೈಪಾಸ್ ಮೂಲಕ ಮತ್ತೆ ಹೆದ್ದಾರಿ ಪ್ರವೇಶಿಸಿ ಉಪ್ಪಿನಂಗಡಿ-ಹಿರೇಬಂಡಾಡಿ-ಕೊಯಿಲ ಸಂಪರ್ಕ ರಸ್ತೆಯಲ್ಲಿ ಸಾಗಿ, ಹಿರೇಬಂಡಾಡಿಯಲ್ಲಿ ನ್ಯಾಯ ಬೆಲೆ ಅಂಗಡಿ ಎದುರುಗಡೆ ತಿರುವು ಪಡೆದುಕೊಂಡು ಅದೇ ರಸ್ತೆಯಾಗಿ ಸಾಗಿ ಮತ್ತೆ ಹೆದ್ದಾರಿಯನ್ನು ದಾಟಿ ಕಾಲೇಜು ಆವರಣದಲ್ಲಿ 10 ಕಿಲೋ ಮೀಟರ್ ಓಟವನ್ನು ಪೂರ್ಣಗೊಳಿಸಿದರು. ರಸ್ತೆಯ ಉದ್ದಕ್ಕೂ ಗ್ರಾಮದ ಮಂದಿ ಕಾತರದಿಂದ ಕಾಯುತ್ತಿದ್ದುದು ಕಂಡು ಬಂತು. ಕ್ರೀಡಾಕೂಟ ಸಮಿತಿ ವತಿಯಿಂದ ಅಲ್ಲಲ್ಲಿ ನೀರಿನ ಬಾಟಲಿ ವ್ಯವಸ್ಥೆ, ಸ್ಪಾಂಜ್, ಐಸ್ ಟ್ಯೂಬ್ ವ್ಯವಸ್ಥೆ ಮಾಡಲಾಗಿತ್ತು. ಉಪ್ಪಿನಂಗಡಿಯಿಂದ ಹಿರೇಬಂಡಾಡಿ ತನಕವೂ ಅಲ್ಲಲ್ಲಿ ಇರುವ ತಿರುವು ರಸ್ತೆ ಬಳಿಯಲ್ಲಿ ರಸ್ತೆಗೆ ವಾಹನ, ಪ್ರಾಣಿಗಳು ಪ್ರವೇಶ ಪಡೆಯದಂತೆ ಸ್ವಯಂ ಸೇವಕರು ಮತ್ತು ಪೊಲೀಸರು ಕರ್ತವ್ಯ ನಿರತರಾಗಿದ್ದರು. ಅಲ್ಲದೇ, ಓಟ ಆರಂಭವಾಗಿ ಸ್ಪರ್ಧಾಳುಗಳು ಹಿರೇಬಂಡಾಡಿ ರಸ್ತೆಯನ್ನು ಪ್ರವೇಶಿಸುವವರೆಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಬ್ಯಾಂಕ್ ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆಯಲಾಗಿತ್ತು. ಬಳಿಕ ಓಟಗಾರರು ಮರಳಿ ಬಂದು ರಾಷ್ಟ್ರೀಯ ಹೆದ್ದಾರಿಯನ್ನು ದಾಟುವ ಸಂದರ್ಭದಲ್ಲಿಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆ ಹಿಡಿದು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಯಿತು. ಅಲ್ಲದೇ, ಓಟಗಾರರು ಸಾಗುವಾಗ ಆ ದಾರಿಯಲ್ಲಿ ಜನ ಸಂಚಾರವನ್ನೂ ನಿರ್ಬಂಧಿಸಲಾಯಿತು. ಪೊಲೀಸ್ ವಾಹನ, ಆ್ಯಂಬುಲೆನ್ಸ್ ದಾರಿಯುದ್ದಕ್ಕೂ ಸಾಗಿದವು.
ಕ್ರೀಡಾಪಟುಗಳಿಗೆ ನ. 18ರ ರಾತ್ರಿಯಿಂದ ಊಟೋಪಚಾರದ ಆತಿಥ್ಯವನ್ನು ಕ್ರೀಡಾಕೂಟದ ವತಿಯಿಂದ ಮಾಡಲಾಗಿತ್ತು. 18ರಂದು ರಾತ್ರಿ 1500 ಮಂದಿಗೆ ವ್ಯವಸ್ಥೆ ಮಾಡಲಾಗಿದ್ದು, ಅನ್ನ ಸಾಂಬಾರು, ಚಪಾತಿ, ಕುರ್ಮಾ, ಪಲ್ಯ, ತೋವೆ ಹಾಗೂ ಕಡ್ಲೆ ಬೇಳೆ ಪಾಯಸವನ್ನು ಉಣಬಡಿಸಲಾಯಿತು. 19ರಂದು ಬೆಳಗ್ಗೆ 1500 ಮಂದಿಗೆ ಇಡ್ಲಿ, ಚಟ್ನಿ, ಸಾಂಬಾರು, ಚಪಾತಿ, ಕುರ್ಮಾ, ಬಾಳೆಹಣ್ಣು ನೀಡಲಾಗಿದೆ. ಮಧ್ಯಾಹ್ನ 2 ಸಾವಿರ ಮಂದಿಗೆ ಅನ್ನ, ಸಾಂಬಾರು, ಚಪಾತಿ, ಕುರ್ಮಾ, ಕಡ್ಲೆ ಬೇಳೆ ಪಾಯಸ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 2500 ಮಂದಿಗೆ ಪಲಾವು, ಮಾಲ್ಟ್ ನೀಡಲಾಗಿದ್ದು, ಒಟ್ಟಿನಲ್ಲಿ ಕ್ರೀಡಾಪಟುಗಳಿಗೆ ಮತ್ತು ಬಂದಂತಹ ಅಧಿಕಾರಿಗಳಿಗೆ ಒಳ್ಳೆಯ ರೀತಿಯಲ್ಲಿ ಆತಿಥ್ಯ ನೀಡಲಾಗಿದೆ ಎಂದು ಆಹಾರ ಸಮಿತಿ ಸಂಚಾಲಕ ಕೃಷ್ಣ ರಾವ್ ಅರ್ತಿಲ ಮಾಹಿತಿ ನೀಡಿದರು. ಅಲ್ಲದೇ ಕ್ರೀಡಾ ಪಟುಗಳಿಗೆ ವಸತಿಯ ವ್ಯವಸ್ಥೆಯನ್ನು ಇಲ್ಲಿನ ಹಲವು ಶಾಲೆಗಳು ವಹಿಸಿಕೊಂಡು, ಉತ್ತಮ ಸೌಲಭ್ಯ ಕಲ್ಪಿಸಿದ್ದವು.