ಉಪ್ಪಿನಂಗಡಿ: ಬಿಜೆಪಿ ಬೆಂಬಲಿತ ಸದಸ್ಯರಿಂದ ಪುತ್ತೂರು ಶಾಸಕರ ವಿರುದ್ಧ ಅವಹೇಳನ; ಆರೋಪ
ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯ ವೇಳೆ ಬಿಜೆಪಿ ಬೆಂಬಲಿತ ಸದಸ್ಯರು ಪುತ್ತೂರು ಶಾಸಕರನ್ನು ಏಕವಚನದಲ್ಲಿ ನಿಂದಿಸಿ, ಅವಹೇಳನ ಮಾಡಿದ್ದಲ್ಲದೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಕ್ರಿಯಾಯೋಜನೆಯ ಬಗ್ಗೆ ಮಾತನಾಡಿದಾಗ ಅವರ ಮೇಲೆ ಹಲ್ಲೆಗೆ ಮುಂದಾಗಿರುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಬಿಜೆಪಿ ಪರ ಕೆಲಸ ಮಾಡುತ್ತಿರುವ ಇಲ್ಲಿನ ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ.
ನ.16ರಂದು ಗ್ರಾ.ಪಂ.ನಲ್ಲಿ ಸಾಮಾನ್ಯ ಸಭೆ ನಡೆದಿದ್ದು, ಈ ಸಭೆಯಲ್ಲಿ 15ನೇ ಹಣಕಾಸಿನ ಕ್ರಿಯಾ ಯೋಜನೆಯನ್ನು ಬಿಜೆಪಿ ಬೆಂಗಲಿತ ಸದಸ್ಯರು ಕಾಂಗ್ರೆಸ್ ಬೆಂಬಲಿತ ಸದಸ್ಯರ ಗಮನಕ್ಕೆ ತಾರದೇ ತಯಾರಿಸಿದ್ದು, ಅದನ್ನು ಕಾಟಾಚಾರಕ್ಕೆ ಸಭೆಯಲ್ಲಿ ಓದಿ ಹೇಳಿದ್ದಾರೆ ಎಂದು ದೂರಲಾಗಿದ್ದು, ಈ ವೇಳೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಪ್ರಶ್ನಿಸಿದಾಗ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಗೀತಾ ದಾಸರಮೂಲೆ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆ ಬಳಿಕ ನಾವು ಕ್ರಿಯಾಯೋಜನೆಯ ಬಗ್ಗೆ ಚರ್ಚಿಸುವಾಗ ಬಿಜೆಪಿ ಬೆಂಬಲಿತ ಸದಸ್ಯರಾದ ಸದಾನಂದ ಶೆಟ್ಟಿ, ಹಮ್ಮಬ್ಬ ಶೌಕತ್ ಅಲಿ, ನಿತಿನ್ ತಾರಿತ್ತಡಿ, ಹೇಮಂತ ಮೈತ್ತಳಿಕೆ ಅವರು ಗೀತಾ ದಾಸರಮೂಲೆಯವರಲ್ಲಿ, ``ನಿನ್ನ ಶಾಸಕ ಇದ್ದಾನೆ. ಅವನಲ್ಲಿ ಮಾಡಿಸಿ. ನಿನ್ನ ಶಾಸಕ ತೆಂಗಿನಕಾಯಿ ಒಡೆಯುವುದಲ್ಲದೆ, ಇನ್ನು ಒಂದು ಗೋಣಿ ಸಿಮೆಂಟಿನ ಕೆಲಸ ಸಹ ಮಾಡಿಲ್ಲ. ಇನ್ನು ನಿನ್ನ ಶಾಸಕ 5 ಲಕ್ಷದ ಕೆಲಸ ಮಾಡಿದರೆ ನಾವು ತಲೆ ಬೋಳಿಸುತ್ತೇವೆ. ನಿನ್ನ ವಾರ್ಡಿಗೆ ಯಾವುದೇ ಅನುದಾನವನ್ನು ಕೊಡುವುದಿಲ್ಲ. ನೀನು ನಿನ್ನ ಶಾಸಕರ ಹತ್ತಿರ ಕೇಳು. ನಿನ್ನ ಶಾಸಕ ಕೇವಲ ಮಾಧ್ಯಮದಲ್ಲಿ ರೈಲು ಬಿಡಲು ಆಗಬಹುದು'' ಎಂದು ಶಾಸಕರ ಬಗ್ಗೆ ಅವಹೇಳನಕಾರಿ ಮತ್ತು ಏಕ ವಚನ ಶಬ್ದ ಬಳಸಿ ಅವರನ್ನು ಟೀಕೆ ಮಾಡಿದ್ದಾರೆ. ಗ್ರಾ.ಪಂ.ನಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಲು ಇವರು ಮುಂದಾಗದೇ ಅವರು ಭ್ರಷ್ಟಾಚಾರವನ್ನು ನಡೆಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಬೆಂಬಲಿತ ಸದಸ್ಯ ನೋರ್ವನಿಗೆ ಇವರೆಲ್ಲಾ ಸೇರಿ ಹಲ್ಲೆ ನಡೆಸಿದ್ದು, ಈ ಬಗ್ಗೆಯೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾಲೂಕು ಪಂಚಾಯತ್ ಸಿಬ್ಬಂದಿ ಜಯಪ್ರಕಾಶ್ ಅವರ ಮೂಲಕ ದೂರನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ನೀಡಿದ್ದಾರೆ.