ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಶಿಶು - ಮಕ್ಕಳ ವೈದ್ಯಕೀಯ ಕಾರ್ಯಾಗಾರ
ಮಂಗಳೂರು: ‘‘ವೈದ್ಯರು ನಿರಂತರ ವೈದ್ಯಕೀಯ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ನೂತನ ಆವಿಷ್ಕಾರಗಳಿಗೆ ಸ್ಪಂದಿಸಿ, ಉನ್ನತ ಮಟ್ಟದ ಚಿಕಿತ್ಸೆ ಮತ್ತು ಸೇವೆ ನೀಡಿ ರೋಗಿಗಳ ಬದುಕನ್ನು ಹಸನುಗೊಳಿಸುವ ಮೂಲಕ ಜನಮನ್ನಣೆಗೆ ಪಾತ್ರರಾಗಬೇಕಾಗಿದೆ ಎಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಿಮಾನ್ ಸಲಹೆ ನೀಡಿದ್ದಾರೆ.
ಅವರು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶಿಶು ಮತ್ತು ಮಕ್ಕಳ ವಿಭಾಗದ ಆಶ್ರಯದಲ್ಲಿ ಕಣಚೂರು ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ರವಿವಾರ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದಲ್ಲಿ ನವಜಾತ ಶಿಶು ಮತ್ತು ಮಕ್ಕಳ ಅಂತಃಸ್ರಾವದ ಬಗ್ಗೆ ರಾಜ್ಯ ಮಟ್ಟದ ವೈದ್ಯಕೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯರು ನಿಯತಕಾಲಿಕ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ವೃದ್ಧಿಸಿದರೆ ತಮ್ಮ ವೈದ್ಯ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ವೈದ್ಯರು ಸಮಾಜದಲ್ಲಿ ಶ್ರೇಷ್ಠ ಮಟ್ಟದ ಸ್ಥಾನವಿದೆ. ಅವರು ರೋಗಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಉನ್ನತ ಮಟ್ಟದ ಚಿಕಿತ್ಸೆ ಮತ್ತು ಸೇವೆ ನೀಡಿ ರೋಗಿಗಳ ನಿರೀಕ್ಷಿತ ಮಟ್ಟಕ್ಕೆ ಸ್ಪಂದಿಸಬೇಕು ಮತ್ತು ತಮ್ಮ ಘನತೆ ಗೌರವಗಳನ್ನು ರಕ್ಷಿಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ಮಣಿಪಾಲ ಆಸ್ಪತ್ರೆಯ ಖ್ಯಾತ ಶಿಶು ಮತ್ತು ಮಕ್ಕಳ ತಜ್ಞೆ ಡಾ. ಶೈಲಾ ಭಟ್ಟಾಚಾರ್ಯ ಮತ್ತು ಕಣಚೂರು ವೈದ್ಯಕೀಯ ಸಂಸ್ಥೆಯ ಡಾ. ಗುರುಪ್ರಸಾದ್ ಭಟ್ ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಸನ್ಮಾನಿಸ ಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಶಹನವಾಜ್ ಮಾಣಿಪ್ಪಾಡಿ ಮತ್ತು ಸಲಹೆಗಾರರಾದ ಡಾ. ಎಂ.ವಿ. ಪ್ರಭು ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ, ಡಾ. ಶಂಶಾದ್ ಎ. ಖಾನ್, ಡಾ.ನೂರುಲ್ಲಾ, ಸಂಘಟನಾ ಅಧ್ಯಕ್ಷ ಡಾ. ಓನಿಯಲ್ ಫೆರ್ನಾಂಡಿಸ್, ಕಾರ್ಯದರ್ಶಿ ಡಾ. ದೀಕ್ಷಾ ಶಿರೋಡ್ಕರ್ ಉಪಸ್ಥಿತರಿದ್ದರು.
ಡಾ. ಶ್ರೇಯಾ ಸ್ವಾಗತಿಸಿದರು. ಡಾ.ರೆಹ್ರಾ ತಾಜ್ ಮತ್ತು ಡಾ. ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ವರ್ಷಾ ವಂದಿಸಿದರು. ರಾಜ್ಯದಿಂದ ಸುಮಾರು 150 ವೈದ್ಯಕೀಯ ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.