ಆಕರ್ಷಕ ದೇಹಸಿರಿಗೆ ಆಹಾರ ಕ್ರಮದಲ್ಲಿ ಹಿಡಿತ ಅಗತ್ಯ: ರಮೀಝ್ ಮಿಝ್
ಮಂಗಳೂರು, ನ.24: ಆಕರ್ಷಕ ದೇಹಸಿರಿಗೆ ನಮ್ಮ ಆಹಾರ ಕ್ರಮದ ಮೇಲೆ ನಮಗೆ ಹಿಡಿತವಿರುವುದೂ ಇಂದಿನ ಅಗತ್ಯ. ನಿಯಮಿತ ವ್ಯಾಯಾಮ, ನಮ್ಮ ಜೀವನಶೈಲಿಯಲ್ಲಿ ಅನಿವಾರ್ಯವಾದ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾ ಗುತ್ತದೆ ಎಂದು ಮಿಸ್ಟರ್ ಏಶ್ಯವಿಜೇತ ದೇಹದಾರ್ಢ್ಯ ಪಟು ರಮೀಝ್ ಮಿಝ್ ಹೇಳಿದ್ದಾರೆ.
ಮಾಶ್ಅಲ್ ಪ್ರಾಪರ್ಟೀಸ್ ವತಿಯಿಂದ ಫಿಜಾ ಬೈ ನೆಕ್ಸಸ್ ಮಾಲ್ನ ಹೊರಾಂಗಣದಲ್ಲಿ ‘‘ಮಿಜ್ ಕ್ಲಾಸಿಕ್ 2024 - ಕರಾವಳಿ ಬಾಡಿ ಬಿಲ್ಡಿಂಗ್ ಹಾಗೂ ಫಿಟ್ನೆಸ್ ಎಕ್ಸ್ಪೋ’’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರಿಗೆ ಆರೋಗ್ಯ, ದೈಹಿಕ ಜ್ಞಾನ ಹಾಗೂ ಉತ್ತಮ ವ್ಯಾಯಾಮದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕರಾವಳಿ ಬಾಡಿಬಿಲ್ಡಿಂಗ್ ಹಾಗೂ ಫಿಟ್ನೆಸ್ ಎಕ್ಸ್ಪೋ ಕಾರ್ಯಕ್ರಮ ಆಯೋಜಿಸಲಾಗಿದೆ. ಸದೃಢ ಆರೋಗ್ಯ, ನಮ್ಮ ದೇಹದ ಮೇಲಿನ ಕೆಲವೊಂದು ವೈಪರೀತ್ಯಗಳ ಸೂಕ್ಷ್ಮತೆಯನ್ನು ದೇಹದಾರ್ಢ್ಯತೆ ಕಲೆ ಕಲಿಸಿಕೊಡುತ್ತದೆ ಎಂದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಮಾತನಾಡಿ ದೇಹದಾರ್ಢ್ಯತೆ ಎನ್ನುವುದು ಆರೋಗ್ಯದ ಗುಟ್ಟು, ಸದೃಢ ದೇಹ ಹೊಂದಲು ಅಪರಿಮಿತ ಆತ್ಮವಿಶ್ವಾಸ ಅಗತ್ಯ ಎಂದರು.
ಯುವಕರಿಗೆ ಯೋಗ್ಯ ಶಿಕ್ಷಣದ ಜತೆಗೆ ಅರೋಗ್ಯ, ಸದೃಢ ದೇಹವೂ ಅಗತ್ಯ.ಫಿಟ್ ಇಂಡಿಯಾ ಕನಸಿಗೆ ಪೂರಕವಾದ ಕಾರ್ಯಕ್ರಮವು ಡಾ. ಅಬ್ದುಲ್ ಶಕೀಲ್, ಅಬೂಬಕರ್ ಅಶ್ರಫ್ ಸಹಯೋಗದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಉತ್ತಮ ಆರೋಗ್ಯ ಹಾಗೂ ಸದೃಡ ಮೈಕಟ್ಟು ಇಂದಿನ ಅಗತ್ಯತೆಯಲ್ಲೊಂದು, ಈನಿಟ್ಟಿನಲ್ಲಿ ಇಂದು ನಾಲ್ಕು ಜಿಲ್ಲೆಗಳ ಜನರಿಗಾಗಿ ಕಾರ್ಯಕ್ರಮ ನಡೆಯುತ್ತಿರುವುದು ಕರಾವಳಿಯ ಪಾಲಿಗೆ ಸುದಿನ ಎಂದರು.
ಸಂಘಟಕರಾದ ಡಾ. ಅಬ್ದುಲ್ ಶಕೀಲ್, ಅಬೂಬಕರ್ ಅಶ್ರಫ್ , ತೀಪುಗಾರರರಾದ ರಾಹುಲ್, ನೂತನ್, ನವಾಝ್, ಒಲಿಂಪಿಕ್ ಸ್ಪೋರ್ಟ್ನ ನಿರ್ವಹಣಾ ನಿರ್ದೇಶಕ ಮೊಹಮ್ಮದ್ ಶರೀಫ್, ಸಂಘಟಕ ತುಪೈಲ್, ಗೌಜಿ ಇವೆಂಟ್ಸ್ ಮಾಲೀಕ ಅಭಿಷೇಕ್, ಕನ್ನಡ ಹೆಲ್ತ್ ಆ್ಯಂಡ್ ಫಿಟ್ನೆಸ್, ತುಳು ಫ್ಯಾಶನ್ ಆ್ಯಂಡ್ ಫಿಟ್ನೆಸ್ನ ಸದಸ್ಯರು ಉಪಸ್ಥಿತರಿದ್ದರು.