ವಿದ್ಯಾರ್ಥಿಗಳಲ್ಲಿ ಕೌಶಲ್ಯ ವೃದ್ಧಿಯಾಗಬೇಕು: ರಾಜ ಬಿ.ಎಸ್
ಕೊಣಾಜೆ: ವಿದ್ಯಾರ್ಥಿಗಳು ಪಠ್ಯದೊಂದಿಗೆ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಇದು ಮುಂದಿನ ಔದ್ಯೋಗಿಕ ಕಾಲಘಟ್ಟದಲ್ಲಿ ಬಹಳ ಉಪಯೋಗವಾಗುತ್ತದೆ ಎಂದು ಮಂಗಳೂರು ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕರಾದ ರಾಜ ಬಿ.ಎಸ್ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗವು ಆಯೋಜಿಸಿದ ವಾಣಿಜ್ಯ ಸಂಘ ಮತ್ತು ಪ್ರಥಮ ವರ್ಷದ ಎಂ.ಕಾಂ. ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಆದ್ಯತೆಯೊಂದಿಗೆ ವರ್ತಮಾನದ ಕುರಿತ ವಿದ್ಯಮಾನಗಳನ್ನು ಗಮನಿಸಬೇಕು ಮತ್ತು ತಮ್ಮ ಅವಕಾಶ ಗಳನ್ನು ತಾವೇ ಸೃಷ್ಟಿಸಿಕೊಳ್ಳಬೇಕು. ಸಂವಹನ, ಜ್ಞಾನ ಮತ್ತು ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕೆ. ರಾಜು ಮೊಗವೀರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ಪ್ರಾಧ್ಯಾಪಕರಾದ ಪ್ರೊ. ವೈ. ಮುನಿರಾಜು, ಪ್ರೊ. ಈಶ್ವರ ಪಿ, ಪ್ರೊ. ವೇದವ ಪಿ. ಮತ್ತು ಪ್ರೊ. ಪರಮೇಶ್ವರ ಉಪನ್ಯಾಸ ಕರಾದ ಗುರುರಾಜ್ ಪಿ. ವೈಶಾಲಿ ಕೆ, ಡಾ. ದಿನಕರ ಕೆಂಜೂರು, ರಶ್ಮಿತಾ ಆರ್. ಕೋಟ್ಯಾನ್, ಸಿ. ಲಹರಿ ಮತ್ತು ರಮ್ಯ ರಾಮಚಂದ್ರ ನಾಯ್ಕ್ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಕಾವ್ಯ ಎಚ್.ಎಸ್. ಮತ್ತು ಮಹಮ್ಮದ್ ಆರೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾಣಿಜ್ಯ ಸಂಘದ ನಾಯಕರಾದ ಕಾರ್ತಿಕ್ ಎಸ್. ಮುಂದಿನ ವರ್ಷದ ವಾಣಿಜ್ಯ ಸಂಘದ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ನಿರ್ಮಲ ಬಿ. ಸ್ವಾಗತಿಸಿ, ಸುದೀಪ್ ಎಚ್.ಆರ್. ವಂದಿಸಿದರು. ತೇಜಸ್ವಿನಿ ಕೆ. ಕಾರ್ಯಕ್ರಮ ನಿರೂಪಿಸಿದರು.