ನೇತ್ರಾವತಿ ಸೇತುವೆಯಲ್ಲಿ ಬೈಕ್ ಸ್ಕಿಡ್: ಕೆಎನ್ಆರ್ ಸಂಸ್ಥೆಯ ವಿರುದ್ಧ ದೂರು
ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿಯಲ್ಲಿರುವ ಕುಮಾರಧಾರ ನದಿಯ ಸೇತುವೆಯ ಮೇಲೆ ಇರುವ ಹೊಂಡ ಹಾಗೂ ಕೆಸರುಮಯ ರಸ್ತೆಯಿಂದಾಗಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ 34 ನೆಕ್ಕಿಲಾಡಿ ನಿವಾಸಿ ಅಬ್ದುರ್ರಹ್ಮಾನ್ ಯುನಿಕ್ ಅವರು ವಾಹನ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದು, ರಸ್ತೆಯ ಈ ಅವ್ಯವಸ್ಥೆಗೆ ಕಾರಣವಾಗಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಸಂಸ್ಥೆ ಕೆಎನ್ಆರ್ ವಿರುದ್ಧ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ನ.25ರಂದು ರಾತ್ರಿ ಈ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಅಬ್ದುರ್ರಹ್ಮಾನ್ ಯುನಿಕ್ ಅವರ ಕೈ, ಕಾಲುಗಳಿಗೆ ಗಾಯ ಗಳಾಗಿವೆ. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವ ಅವರು ದೂರಿನಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಸಂಸ್ಥೆಯಾದ ಕೆಎನ್ಆರ್ ಸಂಸ್ಥೆಯ ವಿರುದ್ಧ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಎನ್ಆರ್ ಸಂಸ್ಥೆಯ ನಿರ್ಲಕ್ಷ್ಯದ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ಸಂಚಾರವೆನ್ನುವುದು ಸಂಕಷ್ಟವಾಗಿದೆ. ಇವರು ಯಾವುದೇ ಸರ್ವೀಸ್ ರಸ್ತೆಯ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ಹೊಂಡ- ಗುಂಡಿಗಳಿದ್ದು, ಅದನ್ನು ಮುಚ್ಚುವ ಕೆಲಸ ಮಾಡುತ್ತಿಲ್ಲ. ಕಾಮಗಾರಿ ಸಂದರ್ಭ ರಸ್ತೆಯಲ್ಲೆಲ್ಲಾ ಮಣ್ಣುಗಳು ಬೀಳುತ್ತಿದ್ದು, ಧೂಳು ಎದ್ದೇಳಬಾರದೆಂದು ಅದಕ್ಕೆ ನೀರು ಹಾಕುವುದರಿಂದ ರಸ್ತೆ ಕೆಸರುಮಯವಾಗಿ ವಾಹನಗಳು ಸ್ಕಿಡ್ ಆಗುವಂತಾಗಿವೆ. ಇಲ್ಲಿ ನಡೆಯುವ ಅಪಘಾತಗಳಿಗೆ ಕೆಎನ್ಆರ್ ಸಂಸ್ಥೆಯೆ ನೇರ ಹೊಣೆಯಾಗಿದೆ ಎಂದು ತಿಳಿಸಿದ್ದಾರೆ.