ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯಕಾರಿ ಸಮಿತಿಯ ಸಭೆ
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯಕಾರಿ ಸಮಿತಿಯ ಸಭೆಯು ಅಧ್ಯಕ್ಷ ಅಲ್ ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರಗಿತು.
ವಕ್ಫ್ ಕಾಯ್ದೆಯು ಸ್ವಾತಂತ್ರ್ಯ ಪೂರ್ವದಲ್ಲಿಯೇ ರೂಪುಗೊಂಡಿದ್ದು, ಈ ತನಕ ಯಾವುದೇ ರಾಜಕೀಯ ಪಕ್ಷಗಳಾಗಲಿ, ಸಂಘಟನೆಗಳಾಗಲಿ ವಿರೋಧ ವ್ಯಕ್ತಪಡಿಸಿರುವುದಿಲ್ಲ. ಆದರೆ ಪ್ರಸಕ್ತ ಕೇಂದ್ರ ಸರಕಾರವು ವಕ್ಫ್ ಸೊತ್ತುಗಳ ಬಗ್ಗೆ ಹಸ್ತ ಕ್ಷೇಪ ನಡೆಸಲು ಹುನ್ನಾರ ನಡೆಸುತ್ತಿದೆ. ಇದನ್ನು ಮುಸ್ಲಿಂ ಸಮುದಾಯವು ತೀವ್ರವಾಗಿ ವಿರೋಧಿಸುತ್ತದೆ. ಅಲ್ಲದೆ ವಕ್ಫ್ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ತೆಗೆದುಕೊಳ್ಳುವ ಯಾವುದೇ ತೀರ್ಮಾನವನ್ನು ಮುಸ್ಲಿಂ ಸಮುದಾಯ ಒಪ್ಪುವು ದಿಲ್ಲ. ವಕ್ಫ್ ಆಸ್ತಿಯ ಸಂರಕ್ಷಣೆಗಾಗಿ ಸರಕಾರಗಳು ಸೂಕ್ತ ಕ್ರಮ ವಹಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ವಕ್ಫ್ ಆಸ್ತಿಯ ಸಂರಕ್ಷಣೆಗಾಗಿ ಸರಕಾರಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಸಿ. ಮಹಮೂದ್, ಹಾಜಿ ಬಾಷಾ ಸಾಹೇಬ್ ಕುಂದಾಪುರ, ಹಾಜಿ ಕೆ.ಎಸ್. ಇಂತಿಯಾಝ್ ಕಾರ್ಕಳ, ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಖಜಾಂಚಿ ಹಾಜಿ ಮೂಸಾ ಮೊಯಿದಿನ್, ಕಾರ್ಪೊರೇಟರ್‌ಗಳಾದ ಅಬ್ದುಲ್ ಲತೀಫ್ ಕಂದಕ್, ಹಾಜಿ ಶಂಸುದ್ದೀನ್ ಕುದ್ರೋಳಿ, ಶಂಸುದ್ದೀನ್ ಬಂದರ್, ಕಾರ್ಯದರ್ಶಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮತ್ತಿತರರು ಉಪಸ್ಥಿತರಿದ್ದರು.