ಕ್ಯಾನ್ಸರ್ ಬಗ್ಗೆ ವ್ಯಾಪಕ ಜಾಗೃತಿಯ ಅಗತ್ಯವಿದೆ: ಡಾ.ದೇವದಾಸ ರೈ
ಮಂಗಳೂರು: ಕ್ಯಾನ್ಸರ್ ಬಗ್ಗೆ ಜನರಲ್ಲಿ ವ್ಯಾಪಕವಾದ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಸಹಿತ ವಿವಿಧ ಸಂಘ ಸಂಸ್ಥೆಗಳು ಗರ್ಭ ಕಂಠದ ಕ್ಯಾನ್ಸರ್ ಸೇರಿದಂತೆ ವಿವಿಧ ಮಾದರಿಯ ಕ್ಯಾನ್ಸರ್ ಪತ್ತೆ ಹಚ್ಚಿ ಗುಣಪಡಿಸಲು ಜನಜಾಗೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬರುತ್ತಿದೆ ಎಂದು ಹಿರಿಯ ವೈದ್ಯ ಹಾಗೂ ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ದೇವದಾಸ ರೈ ತಿಳಿಸಿದ್ದಾರೆ.
ನಗರದ ಬಲ್ಮಠ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ಮಂಗಳೂರು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬಲ್ಮಠ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡ ಗರ್ಭ ಕಂಠದ ಕ್ಯಾನ್ಸರ್ ಬಗೆಗಿನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಸಂಖ್ಯೆಯನ್ನು ಗಮನಿಸಿದಾಗ ಈ ನಿಟ್ಟಿನಲ್ಲಿ ಮಹಿಳೆಯರು, ಹದಿಹರೆಯ ದವರು, ಬಾಣಂತಿಯರು ಮಕ್ಕಳ ಸಹಿತ ವಿವಿಧ ವರ್ಗಗಳ ಜನ ಸಮೂಹ ಸೇರಿದಂತೆ ಎಲ್ಲಾ ವರ್ಗದ ಜನರನ್ನು ಎಚ್ಚರಿಸುವ ಕೆಲಸ ಆಗಬೇಕಾಗುತ್ತದೆ.ಇದರೊಂದಿಗೆ ಕ್ಯಾನ್ಸರ್‌ನಿಂದ ಉಂಟಾಗುವ ಸಾವಿನ ಪ್ರಮಾಣವನ್ನು ತಗ್ಗಿಸ ಬಹುದು. ಗರ್ಭ ಕಂಠದ ಕ್ಯಾನ್ಸರ್ ಸಹಿತ ವಿವಿಧ ಮಾದರಿಯ ಕ್ಯಾನ್ಸರ್‌ನ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಗುಣಪಡಿಸಬಹುದು ಎಂದು ಡಾ. ದೇವದಾಸ ರೈ ತಿಳಿಸಿದ್ದಾರೆ.
ಕ್ಯಾನ್ಸರ್ ಬಗ್ಗೆ ಆತಂಕ ಪಡಬೇಕಾಗಿಲ್ಲ. ಸಾಕಷ್ಟು ಮಹಿಳೆಯರನ್ನು ಕಾಡುತ್ತಿರುವ ಗರ್ಭ ಕಂಠದ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಗುಣಪಡಿಸಲು ಸಾಧ್ಯವಿದೆ. ಈ ಬಗ್ಗೆ ಭಯಪಡಬೇಕಾಗಿಲ್ಲ ಎಂದು ಸ್ತ್ರೀರೋಗ ತಜ್ಞೆ ಡಾ. ಅಪೇಕ್ಷಾ ತಿಳಿಸಿದ್ದಾರೆ.
ಬಲ್ಮಠ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಜಗದೀಶ್ ಬಾಳಾ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭ ರೋಟರಿ ಜಿಲ್ಲೆ ೩೧೮೧ ಇದರ ಅಸಿಸ್ಟೆಂಟ್ ಗವರ್ನರ್ ಕೃಷ್ಣ ಹೆಗ್ಡೆ, ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ರೋಟರಿ ಕ್ಲಬ್ ಸೆಂಟ್ರಲ್ ಮಂಗಳೂರು ಕಾರ್ಯದರ್ಶಿ ರಾಜೇಶ್ ಸೀತಾರಾಮ್, ಸದಸ್ಯರಾದ ಪ್ರದೀಪ್ ಕುಲಾಲ್, ಜಗನ್ನಾಥ ಶೆಟ್ಟಿ, ಜ್ಯಾಕ್ಸನ್ ಸಲ್ದಾನ, ಬಲ್ಮಠ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಧಿಕಾರಿ ಡಾ.ಮೀನಾಕ್ಷಿ ಆಚಾರ್ಯ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಹೃಷಿಕಾ ಮತ್ತು ಕೃಪಾಶ್ರೀ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಸೆಂಟ್ರಲ್ ಮಂಗಳೂರು ಇದರ ಅಧ್ಯಕ್ಷ ಬ್ರಾಯನ್ ಪಿಂಟೋ ಸ್ವಾಗತಿಸಿದರು. ಉಪನ್ಯಾಸಕಿ ಡಾ. ಸುಮನಾ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಧನ್ಯಾಶ್ರೀ ಮತ್ತು ವರ್ಷಿತಾ ಕಾರ್ಯಕ್ರಮ ನಿರೂಪಿಸಿದರು.