ಮಂಗಳೂರು| ಪೊಲೀಸ್ ಕಮಿಷನರ್‌ರ ವರ್ತನೆಗೆ ಸಿಪಿಐ ಖಂಡನೆ
ಮಂಗಳೂರು, ನ.29: ಶಾಂತಿಯುತ ಪ್ರತಿಭಟನೆಗಳಿಗೆ ಮಂಗಳೂರಿನ ಪೊಲೀಸ್ ಕಮಿಷನರೇಟ್ ಅನುಮತಿ ನೀಡದಿರುವ ಕ್ರಮಕ್ಕೆ ದ.ಕ.ಜಿಲ್ಲಾ ಸಿಪಿಐ ಖಂಡಿಸಿದೆ.
ಈ ಹಿಂದೆ ಇಂತಹ ಪ್ರವೃತ್ತಿ ಎಂದೂ ಇರಲಿಲ್ಲ. ವಿಷಮ ಪರಿಸ್ಥಿತಿ ಇದ್ದಲ್ಲಿ ಅನುಮತಿ ನಿರಾಕರಿಸಬಹುದು. ಆದರೆ ಅಂತಹ ಪರಿಸ್ಥಿತಿ ಸದ್ಯ ಇಲ್ಲ. ನ.4ರಂದು ಸಮಾನ ಮನಸ್ಕ ಸಂಘಟನೆಗಳು ಪ್ಯಾಲೆಸ್ತಿನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾದಾಗ ಸಕಾರಣಲ್ಲದೆ ಅನುಮತಿ ನಿರಾಕರಿಸಲಾಯಿತು. ಆದರೂ ಸಂಘಟಕರು ಶಾಂತಿ ಯುತ ಪ್ರತಿಭಟನೆ ನಡೆಸಿದರು. ಪ್ರತಿಭಟನೆಕಾರರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ನ.26ರಂದು ರಾ.ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಕೂಳೂರು ಸೇತುವೆ ಬಳಿ ಧರಣಿ ನಡೆಸಲು ಸಮಾನ ಮನಸ್ಕರು ಮುಂದಾದಾಗ ಅದಕ್ಕೂ ಅನುಮತಿ ನಿರಾಕರಿಸಲಾಯಿತು. ಆದರೂ ಸಂಘಟಕರು ಶಾಂತಿಯುತ ಧರಣಿ ನಡೆಸಿದರು. ಅವರ ಮೇಲೂ ಪ್ರಕರಣ ದಾಖಲಿಸಲಾ ಯಿತು. ಕಮಿಷನರ್‌ರ ಈ ನಡೆ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ. ಕಮಿಷನರ್ ಮೇಲೆ ಕ್ರಮ ಕೈಗೊಳ್ಳಬೇಕು ಅಥವಾ ಅವರನ್ನು ಕೂಡಲೆ ವರ್ಗಾವಣೆ ಮಾಡಬೇಕು ಎಂದು ಸಿಪಿಐ ರಾಜ್ಯ ಸರಕಾರವನ್ನು ಆಗ್ರಹಿಸಿರುವುದಾಗಿ ಜಿಲ್ಲ ಕಾರ್ಯದರ್ಶಿ ಬಿ. ಶೇಖರ ಹೇಳಿಕೆಯಲ್ಲಿ ತಿಳಿಸಿದ್ದಾರೆ.