ಯುಯುಸಿಎಂಎಸ್ ನಲ್ಲಿ ಪರೀಕ್ಷಾ ಶುಲ್ಕ ಪಾವತಿ ಗೊಂದಲ| ಪಿ.ಎ. ಕಾಲೇಜಿನಿಂದ ಯಾವುದೇ ತಪ್ಪು ನಡೆದಿಲ್ಲ: ಆಡಳಿತ ಮಂಡಳಿ

ಮಂಗಳೂರು: ಯುಯುಸಿಎಂಎಸ್ ನಲ್ಲಿ ಪರೀಕ್ಷಾ ಶುಲ್ಕ ಪಾವತಿ ವಿಚಾರ, ಹಾಲ್ ಟಿಕೆಟ್ ನಿರಾಕರಣೆ ಎನ್ನುವ ಆರೋಪ ದಲ್ಲಿ ಯಾವುದೇ ಹುರುಳಿಲ್ಲ, ಈ ವಿಚಾರದಲ್ಲಿ ನಮ್ಮ ಸಂಸ್ಥೆಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಕೊಣಾಜೆಯ ಪಿ.ಎ.ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
2021ರ ಮೊದಲು ವಿದ್ಯಾರ್ಥಿಗಳಿಂದ ಕಾಲೇಜಿನಲ್ಲೇ ಪರೀಕ್ಷಾ ಶುಲ್ಕ ಪಡೆದು ಬಳಿಕ ವಿಶ್ವವಿದ್ಯಾಲಯಕ್ಕೆ ಪಾವತಿ ಮಾಡುವ ಪದ್ದತಿ ಇತ್ತು. ಹೊಸ ಶಿಕ್ಷಣ ನೀತಿ ಜಾರಿಗೆ ಬಂದಿದ್ದರಿಂದ ಯುಯುಸಿಎಂಎಸ್ ತಂತ್ರಾಂಶದ ಮೂಲಕ ವಿದ್ಯಾರ್ಥಿ ಗಳೇ ನೇರವಾಗಿ ಶುಲ್ಕ ಪಾವತಿಸಬೇಕಾಗಿದೆ. ಬೆಂಗಳೂರಿನಲ್ಲಿ ಇದರ ನಿರ್ವಹಣೆ ವ್ಯವಸ್ಥೆ ಇದ್ದು ನಮ್ಮ ಸಂಸ್ಥೆ ಅಥವಾ ಮಂಗಳೂರು ವಿಶ್ವವಿದ್ಯಾನಿಲಯ ಏನೂ ಮಾಡುವಂತಿಲ್ಲ ಎಂದು ಪಿ.ಎ.ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲ ಡಾ.ಸರ್ಫ್ರಾಝ್ ಜೆ. ಹಾಶಿಂ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ನಮ್ಮ ಸಂಸ್ಥೆಯಲ್ಲಿ 768 ವಿದ್ಯಾರ್ಥಿಗಳು ಶುಲ್ಕ ಪಾವತಿಸಿದ್ದು, 27 ವಿದ್ಯಾರ್ಥಿಗಳಿಗೆ ಇನೀಷಿಯೇಟ್ ಎಂದು ಬಂದಿದೆ. ಇಂಥ ಸಮಸ್ಯೆ ಮಂಗಳೂರು ವಿಶ್ವವಿದ್ಯಾನಿಲಯದ ಮೂರು ಸಾವಿರ ವಿದ್ಯಾರ್ಥಿಗಳಿಗೆ ಆಗಿದೆ ಎಂದು ಅಧಿಕಾರಿಗಳೇ ತಿಳಿಸಿದ್ದರು ಎಂದರು.
ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಹರಸಾಹಸಪಟ್ಟಿದೆ. ಇನಿಷಿಯೇಟ್ ಬಂದ ವಿದ್ಯಾರ್ಥಿಗಳಿಗೆ ಮತ್ತೆ ಶುಲ್ಕ ಪಾವತಿಸಲು ಸೂಚಿಸಿದ್ದರಿಂದ ನಮ್ಮ ವಿದ್ಯಾರ್ಥಿಗಳಿಗೂ ಇದನ್ನೇ ಹೇಳಿದ್ದೆವು. ಆದರೆ ಒಬ್ಬ ಮಾತ್ರ ಎರಡನೇ ಬಾರಿ ಶುಲ್ಕ ಪಾವತಿಸಿದ್ದರೆ ಇತರ 26 ವಿದ್ಯಾರ್ಥಿಗಳು ಪಾವತಿಸಲು ಮುಂದಾಗಿಲ್ಲ. ಈ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೋದಾಗ ಅವರೂ ಮನವರಿಕೆ ಮಾಡಿದ್ದಾರೆ. ಅಲ್ಲಿಂದ ಮತ್ತೆ ಕಾಲೇಜಿಗೆ ಬಂದಾಗ ನಾವೂ ವಿವರಿ ಸಿದ್ದೆವು. ಆದರೂ ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಹೋಗ್ತೇವೆ ಎಂದು ಹೋಗಿದ್ದಾರೆ. ಕೊಣಾಜೆ ಠಾಣೆಯಲ್ಲಿ ಕಾಲೇಜು ಕಾನೂನುಬಾಹಿರವಾಗಿ ಶುಲ್ಕ ಪಾವತಿಸಲು ಹೇಳುತ್ತಿದೆ ಎಂದು ದೂರು ಕೊಟ್ಟರು. ಆದರೆ ನಾವು ಕಾನೂನು ಬಾಹಿರವಾಗಿ ಏನೂ ಮಾಡಿಲ್ಲ ಎಂದು ಡಾ.ಸರ್ಫ್ರಾಝ್ ಹೇಳಿದರು.
ಡಿ.8ರ ಮಧ್ಯಾಹ್ನ ಹಾಲ್ ಟಿಕೆಟ್ ನೀಡಲು ಸೂಚನೆ ಬಂದಿದ್ದು ಸೋಮವಾರ ಬೆಳಗ್ಗೆ ಹಾಲ್ ಟಿಕೆಟ್ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ಎಲ್ಲಾ ಸಮಸ್ಯೆ ಮುಗಿದ ಬಳಿಕ ಇಬ್ಬರು ವಿದ್ಯಾರ್ಥಿಗಳು ಮತ್ತು ಪೋಷಕರೊಬ್ಬರು ಸುದ್ದಿಗೋಷ್ಠಿ ನಡೆಸಿದ್ದಾರೆ. ಯುಯುಸಿಎಂಎಸ್ ರಾಜ್ಯ ಸರ್ಕಾರದ ಪೋರ್ಟಲ್ ಆಗಿದ್ದು ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿದ್ದು ನಮ್ಮಿಂದ ಯಾವುದೇ ಸಮಸ್ಯೆ ಆಗಿಲ್ಲ. ಪರೀಕ್ಷೆಯ ದಿನವೇ ಬೆಳಗ್ಗೆ ಮೆಂಟರ್ ಗಳಿಂದ ಹಾಲ್ ಟಿಕೆಟ್ ಪಡೆಯುವಂತೆ ಸೂಚಿಸಲಾಗಿತ್ತು. ಆದರೂ ನಮ್ಮ ಸಂಸ್ಥೆಯ ವಿರುದ್ಧ ವಿದ್ಯಾರ್ಥಿಗಳು ಸುದ್ದಿಗೋಷ್ಠಿ ನಡೆಸಿದ್ದೇಕೆ ಎನ್ನುವುದು ಗೊತ್ತಾಗು ತ್ತಿಲ್ಲ. ಉನ್ನತ ಶಿಕ್ಷಣ ಇಲಾಖೆ ಭಾನುವಾರದ ಬದಲು ಶನಿವಾರಕ್ಕಿಂತ ಮೊದಲೇ ವ್ಯವಸ್ಥೆಯನ್ನು ಸರಿಪಡಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ಡಾ.ಸರ್ಫ್ರಾಝ್ ಜೆ. ಹಾಶಿಂ ಅಭಿಪ್ರಾಯಪಟ್ಟರು.
ಡೀನ್ ಡಾ.ಸಯ್ಯದ್ ಅಮೀನ್, ನಿಯಾಝ್ ಖಾನ್, ಸರ್ಫುದ್ದೀನ್, ದೀಪ್ತಿ, ವಕೀಲ ಶಮಂತ್ ಕಂಡಿಕೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.