ದೇವಚಳ್ಳ ಶಾಲಾ ಮುಖ್ಯ ಶಿಕ್ಷಕರಿಗೆ ಜೀವ ಬೆದರಿಕೆ: ದೂರು ದಾಖಲು
ಸುಳ್ಯ: ವ್ಯಕ್ತಿಯೋರ್ವ ಶಾಲಾ ವಠಾರಕ್ಕೆ ಬಂದು ಶಾಲಾ ಮುಖ್ಯ ಶಿಕ್ಷಕರಿಗೆ ಬೆದರಿಕೆ ಒಡ್ಡಿದ ಘಟನೆ ಮಂಗಳವಾರ ಎಲಿಮಲೆಯಲ್ಲಿ ನಡೆದಿದೆ.
ಎಲಿಮಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಶತಮಾನೋತ್ಸವ ಸಂಭ್ರಮದಲ್ಲಿದ್ದು ಹಗಲು ರಾತ್ರಿ ನಿರಂತರ ಕೆಲಸ ಕಾರ್ಯಗಳು ನಡೆಯುತ್ತಿದೆ. ನಿನ್ನೆಯೂ ಹಿಟಾಚಿ ಯಂತ್ರದ ಮೂಲಕ ಕೆಲಸಗಳು ನಡೆಯುತ್ತಿತ್ತು. ಈ ಕಾಮಗಾರಿ ವೀಕ್ಷಿಸಲು ಮುಖ್ಯಶಿಕ್ಷಕರು, ಹಳೆ ವಿದ್ಯಾರ್ಥಿಗಳು ಮತ್ತು ಶತಮಾನೋತ್ಸವ ಸಮಿತಿಯವರು ಬಂದಿದ್ದರು. ಇದೇ ಸಂದರ್ಭ ಹಳೆ ವಿದ್ಯಾರ್ಥಿಗಳು ಶತಮಾನೋತ್ಸವದ ಲಕ್ಕಿಡಿಪ್ ವಿಚಾರವಾಗಿ ಚರ್ಚಿಸುತ್ತಿದ್ದರೆನ್ನಲಾಗಿದೆ. ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಶತಮಾನೋತ್ಸವ ಸಮಿತಿಯವರು ಬೆಳ್ಳಿಹಬ್ಬ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಿದ್ದರು. ಈ ಸಂದರ್ಭ ಹಳೆ ವಿದ್ಯಾರ್ಥಿ ಸಂಘದ ಚರ್ಚೆ ನಡೆಯುತ್ತಿದ್ದಲ್ಲಿಗೆ ಮುಖ್ಯ ಶಿಕ್ಷಕರಾದ ಶ್ರೀಧರ ಗೌಡರು ಬಂದಾಗ ಚರ್ಚೆ ನಡೆಯುತ್ತಿದ್ದ ಕೊಠಡಿಯ ಹೊರಗೆ ಬಂದಾಗ ಮಣಿಕಂಠ ಎಂಬಾತ ಮುಖ್ಯ ಶಿಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನನ್ನು ಹೊರಗೆ ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮುಖ್ಯ ಶಿಕ್ಷಕ ಶ್ರೀಧರ ಗೌಡ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಣಿಕಂಠ ವಿರುದ್ದ ದೂರು ನೀಡಿದ್ದಾರೆ. ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಕೂಡಾ ಮಣಿಕಂಠ ವಿರುದ್ಧ ದೂರು ನೀಡಿದ್ದಾರೆ.