ರೈಲ್ವೇ ಮೇಲ್ಸೇತುವೆ ಕಾಮಗಾರಿ| ಇಂದು ರಾತ್ರಿಯಿಂದ ಸುರತ್ಕಲ್ - ಕಾನ, ಎಂಆರ್ಪಿಎಲ್ ರಸ್ತೆ ಬಂದ್
ಸುರತ್ಕಲ್: ಬುಧವಾರದಿಂದ ಆರಂಭಗೊಳ್ಳಬೇಕಿದ್ದ ಎಂಆರ್ಪಿಎಲ್ - ಕಾನ ರಸ್ತೆಯ ಸುರತ್ಕಲ್ ರೈಲ್ವೇ ಮೇಲ್ಸೇತುವೆ ಕಾಮಗಾರಿ ಗುರುವಾರರದಿಂದ ಆರಂಭವಾಗಲಿದ್ದು, ಇಂದು ರಾತ್ರಿಯಿಂದ ಸುರತ್ಕಲ್ - ಕಾನ, ಎಂಆರ್ಪಿಎಲ್ ರಸ್ತೆ ಬಂದ್ ಆಗಲಿದೆ.
ಸುರತ್ಕಲ್ ಮೇಲ್ಸೇತುವೆ ಕಾಮಗಾರಿಯ ಹಿನ್ನೆಲೆಯಲ್ಲಿ ಡಿ.11ರಿಂದ ಸುರತ್ಕಲ್ - ಕಾನ ರಸ್ತೆ ಮುಚ್ಚಿ, ಬದಲಿ ಸಂಚಾರ ವ್ಯವಸ್ಥೆ ಸೂಚಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದರು. ಆದರೆ, ಬುಧವಾರ ರೈಲ್ವೇ ಮೇಲ್ಸೇತುವೆಯ ಮೇಲೆ ವಾಹನ ಸಂಚಾರ ನಡೆಯುತ್ತಿರುವ ಬಗ್ಗೆ ಮಂಗಳೂರು ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತೆ ನಜ್ಮಾ ಫಾರೂಖಿ ಅವರನ್ನು ವಾರ್ತಾಭಾರತಿ ಸಂಪರ್ಕಿಸಿತು.
"ಎಂಆರ್ಪಿಎಲ್ - ಕಾನ ರಸ್ತೆಯ ಸುರತ್ಕಲ್ ರೈಲ್ವೇ ಮೇಲ್ಸೇತುವೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕಾಮಗಾರಿ ಆರಂಭವಾಗದ ಹೊರತು ರಸ್ತೆ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಲು ಸಾಧ್ಯವಿಲ್ಲ. ಗುರುವಾರದಿಂದ ಕಾಮಗಾರಿ ಆರಂಭಿಸುವುದಾಗಿ ಕಾಮಗಾರಿಗೆ ಸಂಬಂಧ ಪಟ್ಟವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಬುಧವಾರ ರಾತ್ರಿ ರೈಲ್ವೇ ಮೇಲ್ಸೇತುವೆ ಮೇಲಿನ ರಸ್ತೆ ಸಂಚಾರವನ್ನು ಬಂದ್ ಮಾಡಲಾಗುವುದು. ಆ ನಂತರ ಪೊಲೀಸ್ ಆಯುಕ್ತರು ಸೂಚಿಸಿರುವ ಪರ್ಯಾಯ ಮಾಗರ್ದಲ್ಲಿ ವಾಹನಗಳ ಸಂಚಾರ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಡಿ.15ರ ಒಳಗಾಗಿ ಕಾಮಗಾರಿ ಆರಂಭಿಸದಿದ್ದರೆ ಪ್ರತಿಭಟನೆ: ಎಸ್ಡಿಪಿಐ ಎಚ್ಚರಿಕೆ
ಸುರತ್ಕಲ್ ಜನರ ಬಹುಕಾಲದ ಬೇಡಿಕೆಯಾಗಿರುವ ಸುರತ್ಕಲ್- ಎಂಆರ್ಪಿಎಲ್ - ಕಾನ ರಸ್ತೆಯ ಸುರತ್ಕಲ್ ರೈಲ್ವೇ ಮೇಲ್ಸೇತುವೆ ದುರಸ್ತಿ ಅಥವಾ ನೂತನ ಸೇತುವೆಯ ಕನಸಿಗೆ ಸಂಬಂಧ ಪಟ್ಟವರು ಭರವಸೆಗಳನ್ನಷ್ಟೇ ನೀಡುತ್ತಾ ತಣ್ಣೀರು ಎರಚುತ್ತಲೇ ಬಂದಿದ್ದಾರೆ. ನಾಲ್ಕು ತಿಂಗಳ ಹಿಂದೆ ರೈಲ್ವೇ ಇಲಾಖೆ 76ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ ದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಬುಧವಾರದಿಂದ ಕಾಮಗಾರಿ ಆರಂಭವಾಗಲಿದ್ದು, ರಸ್ತೆ ಬಂದ್ ಮಾಡುವುದಾಗಿ ತಿಳಿಸಿ ಪರ್ಯಾಯ ರಸ್ತೆಯನ್ನೂ ಸೂಚಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಆದರೆ ಬುಧವಾರ ಕಳೆದರೂ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಡಿ.15ರ ಒಳಗಾಗಿ ಕಾಮಗಾರಿ ಆರಂಭಿಸದೇ ಹೋದಲ್ಲಿ ಡಿ.16ರಂದು ಜನಸಾಮಾನ್ಯರನ್ನು ಸೇರಿಸಿಕೊಂಡು ಎಸ್ಡಿಪಿಐ ರೈಲ್ವೇ ಮೇಲ್ಸೇತುವೆ ಬಳಿ ರಸ್ತೆ ಬಂದ್ ಮಾಡಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಎಸ್ಡಿಪಿಐ ಕಾನ ವಾರ್ಡ್ ಅಧ್ಯಕ್ಷ ಬಶೀರ್ ಕಾಲನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.