ಗುರುಗಳಾದ ಪುಟ್ಟರಾಜ ಗವಾಯಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ಅರ್ಪಣೆ ಮಾಡುತ್ತೇನೆ: ಪಂಡಿತ್ ವೆಂಕಟೇಶ್ ಕುಮಾರ್
ಮೂಡುಬಿದಿರೆ: ಶಿಷ್ಯರ ಒಳಿತನ್ನೇ ಬಯಸಿ ನನಗೆ ಎಲ್ಲವನ್ನೂ ನೀಡಿದ ನನ್ನ ಬೆಳವಣಿಗೆಗೆ ಕಾರಣೀಭೂತರಾದ ನನ್ನ ಗುರುಗಳಾದ ಪುಟ್ಟರಾಜ ಗವಾಯಿ ಅವರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ಅರ್ಪಣೆ ಮಾಡುತ್ತೇನೆ ಎಂದು ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಡಿ. ನುಡಿದರು.
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ 30ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ನ ಎರಡನೇಯ ದಿನವಾಗಿರುವ ಬುಧವಾರ ಸಂಜೆ ಆಳ್ವಾಸ್ ವಿರಾಸತ್ 2024" ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಪ್ರಶಸ್ತಿ ನಮ್ಮನ್ನು ಹುಡುಕಿಕೊಂಡು ಬರಬೇಕೇ ಹೊರತು ನಾವು ಅದರ ಹಿಂದೆ ಹೋಗಬಾರದು ಎಂದ ಅವರು, ಶಿಸ್ತು, ಸಂಯಮ, ಸಮಯ ಬಹಳ ದೊಡ್ಡದು. ಅದನ್ನು ತೋರಿಸಿದ ಡಾ.ಎಂ. ಮೋಹನ ಆಳ್ವ ಅವರ ಸಾಧನೆ ಅನನ್ಯ. ಅವರಿಂದ 101ವರ್ಷ ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿದರು.
ಪ್ರಶಸ್ತಿ ಪ್ರದಾನಕ್ಕೂ ಮುನ್ನ ಕಲೆ-ಸಂಸ್ಕೃತಿಯ ಸಮ್ಮಿಲನದ ಸ್ವರೂಪದಂತೆ ಅಲಂಕೃತ ಗೊಂಡ ವಿರಾಸತ್ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದ ಬೃಹತ್ ವೇದಿಕೆಗೆ ಪಂಡಿತ್ ವೆಂಕಟೇಶ್ ಕುಮಾರ್ ಅವರನ್ನು ಸಾಂಪ್ರದಾಯಿಕ ವಾದ್ಯಘೋಷಗಳೊಂದಿಗೆ ಕರೆತರಲಾಯಿತು. ಹೂವಿನ ಹಾರ, ಶಾಲು, ಹಣ್ಣು-ಹಂಪಲು, ಪ್ರಶಸ್ತಿ ಫಲಕ, ಸ್ಮರಣಿಕೆ ಸಹಿತ ಒಂದು ಲಕ್ಷ ರೂಪಾಯಿಯ ನಗದು ಪುರಸ್ಕಾರ ನೀಡಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹಾಗೂ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಂಗಳೂರಿನ ಪ್ರಾರ್ಥನಾ ಶಿಕ್ಷಣ ಸಂಸ್ಥೆಯ ಕರ್ಣ ಬೆಳಗೆರೆ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎಲ್. ಎಚ್. ಮಂಜುನಾಥ್, ಪ್ರಮುಖರಾದ ನರೇಂದ್ರ ಎಲ್. ನಾಯಕ್, ಉದ್ಯಮಿ ಶ್ರೀಪತಿ ಭಟ್ ಉಪಸ್ಥಿತರಿದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಗಾಯಕ ಪಂಡಿತ್ ಪದ್ಮಶ್ರೀ ವೆಂಕಟೇಶ್ ಕುಮಾರ್ ಅವರಿಂದ ಹಿಂದೂಸ್ಥಾನಿ ಗಾಯನ ನಡೆಯಿತು. ವಿದ್ಯಾರ್ಥಿನಿ ಮಾಧವಿ ಕಾರ್ಯಕ್ರಮ ನಿರೂಪಿಸಿದರು.
ಎರಡನೇ ಕಾರ್ಯಕ್ರಮವಾಗಿ ಗುಜರಾತ್ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ಹಾಗೂ ಆಳ್ವಾಸ್ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.