ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ, ಚುನಾವಣಾಧಿಕಾರಿಗೆ ಹೈಕೋರ್ಟ್ ದಂಡ
ಮಂಗಳೂರು: ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕರುಗಳ ಹುದ್ದೆಗೆ ನ್ಯಾಯಾಂಗ ಇಲಾಖೆಯಿಂದ ಪ್ರತಿನಿಧಿಗಳ ಆಯ್ಕೆಗೆ ನ.26ರೊಳಗೆ ಚುನಾವಣೆ ನಡೆಸುವಂತೆ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯವು ಹೊರಡಿಸಿದ ಅಜ್ಞಾಪಕ ನಿರ್ಬಂಧಕಾಜ್ಞೆಯ ಆದೇಶವನ್ನು ಪಾಲಿಸುವ ಬದಲು ಹೈಕೋರ್ಟ್ಗೆ ತಪ್ಪು ಮಾಹಿತಿ ನೀಡಿ ಚುನಾವಣೆ ನಡೆಸಬೇಕೆಂಬ ಆದೇಶದ ವಿರುದ್ಧ ತಡೆಯಾಜ್ಞೆ ಪಡೆದ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾಧಿಕಾರಿಗೆ ಹೈಕೋಟ್ 5 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೆ ಮರು ಚುನಾವಣೆ ನಡೆಸುವಂತೆ ನಿರ್ದೇಶಿಸಿ ರಿಟ್ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯ ಪೀಠ ಆದೇಶ ಹೊರಡಿಸಿದೆ.
ಮತದಾರರ ಪಟ್ಟಿಯಲ್ಲಿ ತನ್ನ ಹೆಸರಿದ್ದರೂ ತನಗೆ ಮತ ಚಲಾಯಿಸುವ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇಲ್ಲವೆಂಬ ಷರಾದಿಂದ ಬಾಧಿತರಾದ ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ, ನ್ಯಾಯಾಂಗ ಇಲಾಖೆಯ ಶಿರಸ್ತೇದಾರ್ ಪ್ರಕಾಶ್ ನಾಯಕ್ ತನಗೆ ಚುನಾವಣೆಯಲ್ಲಿ ಮತದಾನ ಮಾಡುವ ಮತ್ತು ಸ್ಪರ್ಧಿಸುವ ಹಕ್ಕನ್ನು ನೀಡುವಂತೆ ಪ್ರತಿವಾದಿ ಸಂಘಕ್ಕೆ ನಿರ್ದೇಶಿಸಬೇಕೆಂದು ದಾವೆ ಹೂಡಿದ್ದರು.
ಪ್ರಧಾನ ಸಿವಿಲ್ ನ್ಯಾಯಾಲಯವು ನೀಡಿದ ಆಜ್ಞಾಪಕ ನಿರ್ಬಂಧಕಾಜ್ಞೆಯ ಅನ್ವಯ ಚುನಾವಣೆಯಲ್ಲಿ ಮತ ಚಲಾಯಿಸಲು ಹಾಗೂ ಸ್ಪರ್ಧಿಸಲು ಪ್ರಕಾಶ್ ನಾಯಕ್ ಅವಕಾಶವಿದ್ದರೂ ನ್ಯಾಯಾಲಯದ ಆದೇಶವನ್ನು ಚುನಾವಣಾ ಅಧಿಕಾರಿ ಪಾಲಿ ಸದ ಕಾರಣ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಲಾಗಿತ್ತು. ಈ ಮಧ್ಯೆ ಚುನಾವಣಾಧಿಕಾರಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಅವರ ಸ್ಥಾನಕ್ಕೆ ನೇಮಕಗೊಂಡ ಚುನಾವಣಾಧಿಕಾರಿಯು ಮತ್ತೆ ನ್ಯಾಯಾಂಗ ಆದೇಶವನ್ನು ಉಲ್ಲಂಘಿಸಿದ್ದರು.
ಅಲ್ಲದೆ ಸಂಘದ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿ ಪ್ರಧಾನ ಸಿವಿಲ್ ನ್ಯಾಯಾಲಯದ ಆದೇಶದ ವಿರುದ್ಧ ತಡೆಯಾಜ್ಞೆ ಪಡೆದಿದ್ದರು.
ಪ್ರಧಾನ ಸಿವಿಲ್ ನ್ಯಾಯಾಲಯವು ನೀಡಿದ ಆದೇಶವನ್ನು ಉಲ್ಲಂಘಿಸಿ ನ್ಯಾಯಾಂಗ ಇಲಾಖೆಯ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸುವ ಮೂಲಕ ಚುನಾವಣಾಧಿಕಾರಿಯು ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ಪಡೆದಿರುವ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು ಡಿ.27ರಂದು ರಾಜ್ಯ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಲು ನಿರ್ದೇಶಿಸಿದೆ. ಅಲ್ಲದೆ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾಧಿಕಾರಿಗೆ 5 ಲಕ್ಷ ರೂ. ದಂಡವನ್ನು ವಿಧಿಸಿದೆ. ಈ ದಂಡದ ಹಣವನ್ನು ನಾಲ್ಕು ವಾರದೊಳಗೆ ಹೊಸಬೆಳಕು ವೃದ್ಧಾಶ್ರಮ ಸಂಸ್ಥೆಗೆ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಅರ್ಜಿದಾರರ ಪೈಕಿ ನ್ಯಾಯವಾದಿ ರವಿಶಂಕರ್ ಶಾಸ್ತ್ರಿ ಜಿ. ವಾದಿಸಿದ್ದರು.