ಮನೆಯ ಭವಿಷ್ಯ ಮಕ್ಕಳ ಕಣ್ಣಲ್ಲಿ ಪ್ರಕಾಶಿಸುತ್ತದೆ: ಯು.ಟಿ.ಖಾದರ್
ಮುಡಿಪು: ಜವಹಾರ್ ನವೋದಯ ವಿದ್ಯಾಲಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ
ಕೊಣಾಜೆ: ಶಿಕ್ಷಣವು ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವುದರೊಂದಿಗೆ ಸ್ವಾಭಿಮಾನದ ಬದುಕನ್ನು ಕಟ್ಟುವಂತಿರಬೇಕು. ನಮ್ಮ ಮನೆಯ ಭವಿಷ್ಯ ಮಕ್ಕಳ ಕಣ್ಣಲ್ಲಿ ಪ್ರಕಾಶಿಸುತ್ತದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಅವರನ್ನೇ ಸಂಪತ್ತನ್ನಾಗಿಸಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡೋಣ ಎಂದು ಎಂದು ವಿಧಾನಸಭಾ ಅಧ್ಯಕ್ಷರಾದ ಯುಟಿ.ಖಾದರ್ ಅವರು ಹೇಳಿದರು.
ಅವರು ಮುಡಿಪುವಿನ ಜವಹಾರ ನವೋದಯ ವಿದ್ಯಾಲಯದಲ್ಲಿ ಶನಿವಾರ ನಡೆದ 24 ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿ ಜೀವನದಲ್ಲೇ ಭವಿಷ್ಯದ ಕನಸನ್ನುಕಾಣಬೇಕು. ಶಿಕ್ಷಣದೊಂದಿಗೆ ತಾಳ್ಮೆಯನ್ನೂ ಮೈಗೂಡಿಸಿಕೊಂಡು ಮುನ್ನಡೆದರೆ ನಮ್ಮ ಜೀವನದ ಯಶಸ್ಸನ್ನು ಯಾರೂ ತಡೆಯಲಾರರು ಎಂದರು.
ಹೈದರಾಬಾದ್ ವಲಯದಲ್ಲಿ ಮುಡಿಪು ಜವಹರಲಾಲ್ ನವೋದಯದ ವಿದ್ಯಾಲಯವು ಅತ್ಯುತ್ತಮ ಶಾಲೆಯಾಗಿ ಆಯ್ಕೆಯಾಗಿರುವುದಕ್ಕೆ ನಮ್ಮ ನಾಡಿಗೆ ಹೆಮ್ಮೆಯಾಗಿದ್ದು, ಇದಕ್ಕಾಗಿ ಶಾಲೆಯ ಅಭಿವೃದ್ಧಿಗಾಗಿ ಐದು ಲಕ್ಷ ರೂ ಶಾಸಕ ನಿಧಿಯಿಂದ ನೀಡುತ್ತೇನೆ ಎಂದು ಘೋಷಿಸಿದರು.
ಇದೇ ಸಂದರ್ಭದಲ್ಲಿ ಅವರು ಶಾಲೆಯಲ್ಲಿ ನಿರ್ಮಾಣಗೊಂಡ ಶುದ್ದ ಕುಡಿಯುವ ನೀರಿನ ಘಟಕವನ್ನು ಯು.ಟಿ.ಖಾದರ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ರಾಜೇಶ್ ಪಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮುಡಿಪುವಿನ ನವೋದಯ ಶಿಕ್ಷಣ ಸಂಸ್ಥೆಯು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಉತ್ತಮ ಸಾಧನೆ ತೋರಿದೆ. ಇದರಿಂದಾಗಿ ನವೋದಯ ಶಿಕ್ಷಣ ಸಂಸ್ಥೆಯ ಹೈದರಾಬಾದ್ ವಲಯದಲ್ಲಿ ನಮ್ಮ ಸಂಸ್ಥೆಯು ಉತ್ತಮ ಪಿಎಂಶ್ರೀ ಶಾಲೆಯಾಗಿ ಆಯ್ಕೆಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ . ಉಪಪ್ರಾಂಶುಪಾಲರಾದ ರೇಖಾಆಶೋಕ, ವಿ.ಯಂ.ಸಿ ಸದಸ್ಯರಾದ ಪ್ರೊ.ಜಗದೀಶ್ ಪ್ರಸಾದ್, ಕೃಷ್ಣ ಕುಮಾರ್, ವಿನಯ ಕುಮಾರಿ, ಕೋಶಾಧಿಕಾರಿ ಮೋಹನ್ ದಾಸ್ ಅಮ್ಮೆಂಬಳ, ಶಿಕ್ಷಕ ರಕ್ಷಕ ಸದಸ್ಯರು ಉಪಸ್ಥಿತರಿದ್ದರು.
ಉಪಪ್ರಾಂಶುಪಾಲರಾದ ರೇಖಾ ಅಶೋಕ್ ಅವರು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಹಕೀಂ ಅವರು ವಂದಿಸಿದರು. ಶಿಕ್ಷಕರಾದ ರೆಹ್ಮಾನ್ ಅವರು ಕಾರ್ಯಕ್ರಮ ನಿರೂಪಿಸಿದರು.