ಮಂಗಳೂರು ನಗರದಲ್ಲಿ ಸಂಭ್ರಮದ ಕ್ರಿಸ್ಮಸ್
ಮಂಗಳೂರು: ಯೇಸು ಕ್ರಿಸ್ತರ ಜನ್ಮ ದಿನವಾಗಿರುವ ಪವಿತ್ರ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ನಗರದ ಚರ್ಚ್ಗಳಲ್ಲಿ ಕ್ಯಾರೋಲ್ ಗಾಯನ, ವಿಶೇಷ ಬಲಿಪೂಜೆ, ಜಾಗತಿಕ ಶಾಂತಿಗಾಗಿ ಪ್ರಾರ್ಥನೆ ನಡೆಯಿತು.
ಬಲಿಪೂಜೆಯ ಬಳಿಕ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಿತು.
ಚರ್ಚ್ಗಳಲ್ಲಿ ಅಪಾರ ಸಂಖ್ಯೆಯಲ್ಲಿ ಕ್ರೈಸ್ತರು ಆಗಮಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಮಂಗಳೂರಿನ ರೊಸಾರಿಯೊ ಚರ್ಚ್ನಲ್ಲಿ ಮಂಗಳೂರಿನ ಬಿಷಪ್ ಅತಿ ವಂ.ಡಾ.ಪೀಟರ್ ಪಾಲ್ ಸಲ್ಡಾನ ಅವರು ಕ್ರಿಸ್ಮಸ್ ಆಚರಣೆಯ ಪವಿತ್ರ ಬಲಿಪೂಜೆಯನ್ನು ನೆರವೇರಿಸಿ ಸಂದೇಶ ನೀಡಿದರು.
ಕ್ರಿಸ್ಮನ್ ಹಿನ್ನೆಲೆಯಲ್ಲಿ ಮಿನುಗುವ ನಕ್ಷತ್ರಗಳು, ದೀಪಗಳು ಮತ್ತು ಸುಂದರವಾಗಿ ವಿನ್ಯಾಸಗೊಳಿಸಲಾದ ತೊಟ್ಟಿಲುಗಳು ಚರ್ಚ್ ಆವರಣವನ್ನು ಅಲಂಕರಿಸಿದ್ದವು. ನಗರದ ವಿವಿಧ ಚರ್ಚ್ಗಳನ್ನು ವಿದ್ಯುದ್ದೀಪಾಲಂಕಾರ ಗೊಳಿಸಲಾಗಿದೆ. ಕೆಥೋಲಿಕ್ ಚರ್ಚ್ಗಳಾದ ನಗರದ ರೊಸಾರಿಯೋ, ಮಿಲಾಗ್ರಿಸ್, ಬೆಂದೂರ್ವೆಲ್ ಅಶೋಕ ನಗರ, ಬೊಂದೇಲ್, ವಾಮಂಜೂರು, ಪಾಲನೆ, ಕುಲಶೇಖರ, ಫಲ್ಲೀರ್, ಕಾಸಿಯಾ, ಕೂಳೂರು, ಬಿಜೈ, ಬಜಾಲ್, ಶಕ್ತಿನಗರ, ಬಿಕರ್ನಕಟ್ಟೆ ಸಹಿತ ವಿವಿಧ ಚರ್ಚ್ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಪ್ರೊಟೆಸ್ಟೆಂಟ್ ಧರ್ಮಪ್ರಾಂತದ ಬಲ್ಮಠ ಸಿಎಸ್ಐ ಶಾಂತಿ ಕ್ಯಾಥೆಡ್ರಲ್, ಗೋರಿಗುಡ್ಡ, ಕಾಂತಿ ಚರ್ಚ್ ಜಪ್ಪು, ಕೋಡಿಕ್ಕಲ್ ಚರ್ಚ್ಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.