ಹೊಲಿಗೆ ತರಬೇತಿಯಿಂದ ಸ್ವ ಉದ್ಯೋಗ ಸಾಧ್ಯ: ಫಾರೂಕ್ ಉಳ್ಳಾಲ್
ಹೊಲಿಗೆ ತರಬೇತಿ ಪಡೆದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಣೆ
ಉಳ್ಳಾಲ: ಅಧಿಕ ಬಂಡವಾಳ ಇಲ್ಲದೆ ನಮ್ಮದೇ ಆದ ಸ್ವ ಉದ್ಯೋಗವನ್ನು ಆರಂಭಿಸಿ, ಆರ್ಥಿಕವಾಗಿ ಸ್ವಾವಲಂಬನೆಯ ಜೀವನ ನಡೆಸಲು ಹೊಲಿಗೆ ತರಬೇತಿ ಪೂರಕವಾಗಿವೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಸಂಯೋಜಕ ಫಾರೂಕ್ ಉಳ್ಳಾಲ್ ಹೇಳಿದರು.
ಅವರು ಉಳ್ಳಾಲದ ಸಮಸ್ತದ ಕಚೇರಿಯಲ್ಲಿ ನಡೆದ ಎಸ್ ವೈ ಎಸ್ ಉಳ್ಳಾಲ ಘಟಕದ ವತಿಯಿಂದ ನಡೆಸಲ್ಪಡುವ ಉಚಿತ ಹೊಲಿಗೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ತೇರ್ಗಡೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೋಂದಾಯಿತ ವಿದ್ಯುತ್ ಗುತ್ತಿಗೆದಾರ ಯು.ಬಿ.ಸಿದ್ಧೀಕ್ ಮಾತನಾಡಿ ಹೊಲಿಗೆ ತರಬೇತಿಯಂತಹ ಸಮಾಜಮುಖಿ ಸೇವೆಯನ್ನು ನೀಡುತ್ತಿರುವ ಎಸ್ ವೈ ಎಸ್ ನ ಕಾರ್ಯವನ್ನು ಪ್ರಶಂಸಿ ಶುಭಹಾರೈಸಿದರು.
ಮುಖ್ಯ ಅತಿಥಿ, ಪತ್ರಕರ್ತ ಬಶೀರ್ ಕಲ್ಕಟ್ಟ ಸರ್ಕಾರ ಮತ್ತು ಸಮಾಜ ಸೇವಾ ಸಂಘ ಸಂಸ್ಥೆಗಳು ಮಹಿಳೆಯರಿಗಾಗಿ ನೀಡುತ್ತಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಎಸ್ ವೈ ಎಸ್ ಉಳ್ಳಾಲ ಘಟಕದ ಅಧ್ಯಕ್ಷ ಕೆ.ಎಸ್.ಮೊಯ್ದಿನ್ ಸಭೆಯ ಅಧ್ಯಕ್ಷತೆ ವಹಿಸಿ ಪೂರಕ ಮಾಹಿತಿ ನೀಡಿದರು.
ಶಂಶುಲ್ ಉಲೇಮಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು.ಟಿ.ಮುಹಮ್ಮದ್ ಹಾಜಿ, ಎಸ್.ವೊಯಿ.ಎಸ್ ಕೋಶಾಧಿಕಾರಿ ಅಬ್ದುಲ್ ಅಝೀಝ್ ಬಸ್ತಿ ಪಡ್ಪು, ಮಾಸ್ತಿಕಟ್ಟೆ ಲ್ಯಾಬ್ ನ ವ್ಯವಸ್ಥಾಪಕ ಅನ್ಸಾಫ್, ಪಿ.ಡಬ್ಲ್ಯೂ ಡಿ. ಗುತ್ತಿಗೆದಾರ ಯೂಸುಫ್ ಸುಲ್ತಾನ್ ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಪಾಲ್ಗೊಂಡರು.
ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ನಸೀಮ ಅಬ್ದುಲ್ ಸಲಾಂ ವಿದ್ಯಾರ್ಥಿಗಳ ಕಲಿಕೆ ಮತ್ತು ಮುಂದಿನ ನಡೆಯ ಬಗ್ಗೆ ಸಲಹೆ ನೀಡಿದರು. ಎಸ್ ವೈ ಎಸ್ ಉಳ್ಳಾಲ ಘಟಕದ ಪ್ರಧಾನ ಕಾರ್ಯದರ್ಶಿ ರಝಾಕ್ ಹರೇಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.