ನೆರವು ಪಡೆದವರು ಮರಳಿ ಸಮಾಜಕ್ಕೆ ನೆರವು ನೀಡುವಂತಾಗಬೇಕು: ಡಾ.ಕೆ.ಪ್ರಕಾಶ್ ಶೆಟ್ಟಿ
ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯಿಂದ 3000 ಕುಟುಂಬಗಳಿಗೆ ಆರ್ಥಿಕ "ನೆರವು"
ಮಂಗಳೂರು: ಆಶಾ ಪ್ರಕಾಶ್ ಶೆಟ್ಟಿ “ನೆರವು” ಸಹಾಯಹಸ್ತ ಪ್ರದಾನ ಕಾರ್ಯ ಕ್ರಮ ಬುಧವಾರ ನಗರದ ಗೋಲ್ಡ್ ಫಿಂಚ್ ಸಿಟಿಯಲ್ಲಿ ಉದ್ಘಾಟಿಸಿದ ಬಳಿಕ ಮಾತಾಡಿದ ಎಂ.ಆರ್.ಜಿ.ಗ್ರೂಪ್ ಚೇರ್ಮನ್ ಡಾ.ಕೆ.ಪ್ರಕಾಶ್ ಶೆಟ್ಟಿ ಅವರು, “ನನ್ನ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಸಮಾಜಕ್ಕೆ ನನ್ನಿಂದ ಕಿಂಚಿತ್ತು ನೆರವು ನೀಡುವ ಉದ್ದೇಶದಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ನನ್ನ ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಸಮಾಜಕ್ಕೆ ನೆರವು ನೀಡುವ ಸಂಕಲ್ಪ ಮಾಡಿದ್ದೇನೆ.
ಇಂದು ನನ್ನ ಬಾಳಿನಲ್ಲಿ ಅತ್ಯಂತ ಖುಷಿಯ ದಿನ. ನನ್ನ ಈ ಕಾರ್ಯಕ್ಕೆ ನನ್ನ ಪತ್ನಿ ಮಗ ಸೊಸೆ ಸಹಿತ ಕುಟುಂಬದ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಇಂದು ಇಲ್ಲಿ ಸಮಾರಂಭ ನಡೆಸಿ ನೆರವು ನೀಡುವ , ಮೂಲಕ ಸಹಾಯ ಪಡೆದ ಕೈಗಳು ಮುಂದೊಂದು ದಿನ ಅವರು ಕೂಡಾ ಸಮಾಜದಲ್ಲಿ ಒಂದಷ್ಟು ಮಂದಿಗೆ ನೆರವು ನೀಡಲು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಹಲವರು ಮುಂದೆ ಬಂದಿದ್ದಾರೆ. ಕಷ್ಟ ಎಲ್ಲರಿಗೂ ಬರುತ್ತದೆ, ಆದರೆ ಧೃತಿಗೆಡದೆ ಅದನ್ನು ಎದುರಿಸುವ ಛಲ ಬೆಳೆಸಿ ಕೊಳ್ಳಬೇಕು. ವಿದ್ಯಾರ್ಥಿಗಳು ನಿಮ್ಮ ತಂದೆ ತಾಯಿ ಗೌರವ ಪಡುವಂತೆ ಸಾಧನೆ ಮಾಡಿ ದೇಶದಲ್ಲಿ ಗುರುತಿಸುವಂತಾಗಬೇಕು ಎಂದರು.
ಯೋಜನೆ ಆರಂಭದ ವರ್ಷ 2019. ಮೊದಲ ವರ್ಷ ವಿತರಣೆ ಮಾಡಲಾದ ಮೊತ್ತ 1.25 ಕೋಟಿ ರೂ. ವರ್ಷದಿಂದ ಈ ಮೊತ್ತ ಏರುತ್ತಾ ಹೋಗಿದೆ. ಈ ಯೋಜನೆಯ ವ್ಯಾಪ್ತಿ ದಕ್ಷಿಣ ಕನ್ನಡ, ಉಡುಪಿ ಮತ್ತು ಗಡಿನಾಡು ಕಾಸರಗೋಡು ಜಿಲ್ಲೆಗಳು. (ಕೆಲವು ವಿಶೇಷ ಪ್ರಕರಣಗಳಲ್ಲಿ ಮಾನವೀಯತೆಯ ಹಿನ್ನೆಲೆಯಲ್ಲಿ ಈ ಗಡಿಯನ್ನು ದಾಟಿಯೂ ನೆರವು ನೀಡಲಾಗಿದೆ) ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ "ನೆರವು" ಪ್ರದಾನ ಕಾರ್ಯಕ್ರಮದಲ್ಲಿ ಈ ವರ್ಷ ಒಟ್ಟು 3000 ಕುಟುಂಬಗಳಿಗೆ, 50 ಸಂಸ್ಥೆ ಗಳಿಗೆ ಸೇರಿ 6 ಕೋಟಿ ರೂ. ಗೂ ಮಿಕ್ಕಿ ನೆರವನ್ನು ವಿತರಿಸ ಲಾಗುತ್ತಿದೆ ಎಂದು ಎಂಜಿಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಮುಂದೆ ಗೋಲ್ಡ್ ಪಿಂಚ್ ಸಿಟಿಯಲ್ಲಿ ಐ.ಟಿ ಪಾರ್ಕ್ ಟೌನ್ ಶಿಪ್ ಅಭಿವೃದ್ಧಿ ಪಡಿಸಿ ಸುಮಾರು 60 ಸಾವಿರ ಉದ್ಯೋಗ ನೀಡುವ ಗುರಿ ಇದೆ ಎಂದರು.
*ಸಮಾಜದಲ್ಲಿರುವ ಪ್ರತಿಯೊಬ್ಬರು ತಮ್ಮ ಮಿತಿಯಲ್ಲಿಸಾಮಾಜಿಕ ಹೊಣೆಗಾರಿಕೆಯಿಂದ ಸಮಾಜಕ್ಕೆ ಕೊಡುಗೆ ನೀಡುವ ಅಗತ್ಯವಿದೆ ಎಂದು ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ನಿನ ಅಧ್ಯಕ್ಷರು ಹಾಗು ಸಹ- ಸಂಸ್ಥಾಪಕರೂ ಆಗಿರುವ ಡಾ. ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ.
“ಶಿಕ್ಷಣದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳು, ವಿಶೇಷ ಚೇತನ ಮಕ್ಕಳು, ಸಾಮಾಜಿಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಪ್ರಕಾಶ್ ಶೆಟ್ಟಿಯವರ ನೆರವು ಕಾರ್ಯಕ್ರಮ ಶ್ಲಾಘನೀಯವಾದುದು. ತಾವೇ ಹುಡುಕಿಕೊಂಡು ಹೋಗಿ ಅರ್ಹರಿಗೆ ನೆರವು ನೀಡುವ ಮಾದರಿ ಕಾರ್ಯಕ್ರಮ ಇದಾಗಿದೆ. ಇಲ್ಲಿ ಆರ್ಥಿಕ ಸಹಾಯ ಪಡೆದಿರುವ ಮಕ್ಕಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದೆ“ ಎಂದರು.
ಪ್ರಾಸ್ತಾವಿಕ ಮಾತನ್ನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, “ಬೆಂಗಳೂರು ಹುಬ್ಬಳ್ಳಿ ಗುಲ್ಬರ್ಗದಲ್ಲಿ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅದಮ್ಯ ಫೌಂಡೇಶನ್ ನ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್ ಅವರು ಮಾಡುತ್ತ ಬಂದಿದ್ದಾರೆ. ಎಲ್ಲೂ ತಮ್ಮ ಸಹಾಯವನ್ನು ಹೊರಗಡೆ ತೋರಿಸದೆ ಎಲ್ಲರೊಳಗೆ ಒಂದಾಗಿ ಬದುಕುತ್ತಿರುವ ಅವರು ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸ ತಂದಿದೆ. ಅದೇ ರೀತಿ ಪ್ರಕಾಶ್ ಶೆಟ್ಟಿಯವರ ಪ್ರತೀ ಕಾರ್ಯದ ಹಿಂದೆ ಇಂತಹ ಪುಣ್ಯ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತ ಪ್ರಕಾಶ್ ಶೆಟ್ಟಿಯವರ ಕುಟುಂಬಕ್ಕೆ ನಿಮ್ಮೆಲ್ಲರ ಹಾರೈಕೆಯಿರಲಿ“ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಪ್ರಕಾಶ್ ಶೆಟ್ಟಿ ಅವರಂತಹ ಜೊತೆಯಲ್ಲಿ ಇರುವುದೇ ನಮ್ಮ ಭಾಗ್ಯ. ಹುಟ್ಟುವಾಗ ಶ್ರೀಮಂತಿಕೆ ಇಲ್ಲದಿದ್ದರೂ ತಮ್ಮ ಕಾರ್ಯ ಸಾಧನೆಯಿಂದ ಹಂತಹಂತವಾಗಿ ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಗುರುತಿಸಿ ಕೊಂಡು ಬಂದಿರುವ ಪ್ರಕಾಶ್ ಶೆಟ್ಟಿ ಅವರ ವ್ಯಕ್ತಿತ್ವ ನಮಗೆಲ್ಲ ಮಾದರಿ. ಅವರ ದಾನ ಧರ್ಮದ ಸಮಾಜಮುಖಿ ಕಾರ್ಯ ಇದೇ ರೀತಿ ಮುಂದುವರಿಯಲಿ ಎಂದರು.
ವೇದಿಕೆ ಯಲ್ಲಿ ಶಿಕ್ಷಣ, ಮನೆ ನಿರ್ಮಾಣ, ವೈದ್ಯಕೀಯ ಚಿಕಿತ್ಸೆ, ವಿಶೇಷ ಚೇತನ ಮಕ್ಕಳು ಹಾಗೂ ಸಾಮಾಜಿಕ ಸಂಘಟನೆ ಗಳಿಗೆ ಸಾಂಕೇತಿಕವಾಗಿ “ನೆರವು” ಯೋಜನೆಯ ಆರ್ಥಿಕ ಸಹಾಯ ನೀಡಲಾಯಿತು. ಸಮಾರಂಭದಲ್ಲಿ ಎಂ.ಆರ್.ಜಿ. ಗ್ರೂಪ್ ನ ಆಡಳಿತ ನಿರ್ದೇಶಕರಾದ ಗೌರವ್ ಪಿ. ಶೆಟ್ಟಿ ಉಪಸ್ಥಿತರಿದ್ದರು. ಅನುಷ್ಕಾ ಶೆಟ್ಟಿ ವಂದಿಸಿದರು.ವಸಂತ ಗಿಳಿಯಾರು ಕಾರ್ಯಕ್ರಮ ನಿರೂಪಿಸಿದರು.