ದ.ಕ. ಅಮೆಚೂರು ಕಬಡ್ಡಿ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕಕ್ಕೆ ಶಾಸಕ ಹರೀಶ್ ಪೂಂಜಾ ಒತ್ತಾಯ
ಮಂಗಳೂರು, ಡಿ.27: ಹಲವು ಲೋಪದೋಷಗಳಿಂದ ಕೂಡಿರುವ ದ.ಕ. ಅಮೆಚೂರು ಕಬಡ್ಡಿ ಸಂಸ್ಥೆಗೆ ವಿಚಾರಣಾ ಅಧಿಕಾರಿಯ ಶಿಫಾರಸಿನಂತೆ ತಕ್ಷಣ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಸಂಸ್ಥೆಯ ಸದಸ್ಯ, ಶಾಸಕ ಹರೀಶ್ ಪೂಂಜಾ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದ.ಕ. ಅಮೆಚೂರು ಕಬಡ್ಡಿ ಸಂಸ್ಥೆಯ ಆಡಳಿತ ವ್ಯವಸ್ಥೆಯು ನಕಲಿ ದಾಖಲೆ ಸೃಷ್ಟಿ, ಅನಧಿಕೃತವಾಗಿ ಪದಾಧಿಕಾರಿಗಳ ನೇಮಕ, ಪೋರ್ಜರಿ ಸಹಿ, ಅವ್ಯವಹಾರ, ಅಧಿಕಾರ ದುರುಪಯೋಗ ಸಹಿತ ಅನೇಕ ಲೋಪದೋಷಗಳಿಂದ ಕೂಡಿರುವ ಬಗ್ಗೆ ಕೆಲ ಸದಸ್ಯರು ಕೋಆಪರೇಟಿವ್ ಸೊಸೈಟಿ ರಿಜಿಸ್ಟ್ರಾರ್‌ಗೆ ದೂರು ನೀಡಿರುತ್ತಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿರುವ ವಿಚಾರಣಾ ಅಧಿಕಾರಿಯು ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಲು ಶಿಫಾರಸು ಮಾಡಿರುತ್ತಾರೆ. ಅದರಂತೆ ಆಡಳಿತಾಧಿಕಾರಿಯನ್ನು ಸರಕಾರ ನೇಮಿಸಬೇಕು ಎಂದರು.
ರಾಜ್ಯದ ಕಬಡ್ಡಿ ಆಟಗಾರರ ಜೀವನಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಜಿಲ್ಲೆಯಲ್ಲಿ ಪ್ರತಿಭಾವಂತ ಆಟಗಾಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದೇನೆ. ಆ ಬಗ್ಗೆ ನನ್ನ ವಿರುದ್ಧ ಇತ್ತೀಚೆಗೆ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆಯ ಅಧ್ಯಕ್ಷ ರಾಕೇಶ್ ಮಲ್ಲಿ ಮತ್ತವರ ತಂಡ ಮಾಡಿರುವ ಎಲ್ಲಾ ಆರೋಪಗಳಿಗೆ ಉತ್ತರಿಸಲು ಸಿದ್ಧನಿದ್ದೇನೆ ಎಂದು ಹರೀಶ್ ಪೂಂಜಾ ಹೇಳಿದರು.
ಅಂತರ್ ವಿವಿ ಕಬಡ್ಡಿಯಲ್ಲಿ 33 ವರ್ಷ ಬಳಿಕ ಮಂಗಳೂರು ವಿವಿ ತಂಡ ಚಿನ್ನದ ಪದಕ ಗೆದ್ದಿದೆ. ಆದರೆ ಈ ಅಪರೂಪದ ಸಾಧನೆ ತೋರಿದ ತಂಡದಲ್ಲಿದ್ದ ಯಾವೊಬ್ಬ ಆಟಗಾರನೂ ರಾಜ್ಯ ತಂಡಕ್ಕೆ ಆಯ್ಕೆಯಾಗಿಲ್ಲ. ಜಿಲ್ಲೆಯಲ್ಲಿ ತುಂಬಾ ಮಂದಿ ಪ್ರತಿಭಾವಂತ ತೀರ್ಪುಗಾರರಿದ್ದಾರೆ. ಅವರಲ್ಲಿ ಎಷ್ಟು ಮಂದಿ ಪ್ರೊಕಬಡ್ಡಿಯಲ್ಲಿ ಅವಕಾಶ ಪಡೆಯಲು ಸಾಧ್ಯವಾಯಿತು? ಪ್ರೇಮನಾಥ ಉಳ್ಳಾಲ್ ಅವರನ್ನು ಹೊರತುಪಡಿಸಿದರೆ ಎಷ್ಟು ಮಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿ ದ್ದಾರೆ? ಉರ್ವ ಮೈದಾನದ ಸಮೀಪ ಸ್ಮಾರ್ಟ್ ಸಿಟಿ ವತಿಯಿಂದ 35 ಕೋ.ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಿಸುತ್ತಿರುವ ಬಗ್ಗೆ ರಾಕೇಶ್ ಮಲ್ಲಿ ಹೇಳಿಕೊಂಡಿದ್ದಾರೆ. ಇದು ಬಿಜೆಪಿ ಸರಕಾರದ ಅವಧಿಯಲ್ಲಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕ ವೇದವ್ಯಾಸ ಕಾಮತ್‌ರ ಮೂಲಕ ನಾವು ಶ್ರಮಿಸಿದ ಕಾರಣ ಸಾಧ್ಯವಾಯಿತು ಎಂದು ಹರೀಶ್ ಪೂಂಜಾ ನುಡಿದರು.
ರಾಕೇಶ್ ಮಲ್ಲಿ 2009ರಲ್ಲಿ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾನೂನು ಬಾಹಿರವಾಗಿ ಆಯ್ಕೆಯಾಗಿದ್ದಾರೆ. ಯಾಕೆಂದರೆ ಅವರು 2012ರಲ್ಲಿ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದಿರುವುದು. 2012ರಿಂದ 2024 ತನಕ ನಿರಂತರ ಅಧ್ಯಕ್ಷರಾಗಿರುವ ರಾಕೇಶ್ ಮಲ್ಲಿ ಸಂಸ್ಥೆಗೆ ಯಾವ ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿರುವ ಹರೀಶ್ ಪೂಂಜಾ ಅಂತಾರಾಷ್ಟ್ರೀಯ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಮಮತಾ ಪೂಜಾರಿ ಹಾಗೂ ಹಲವು ರಾಷ್ಟ್ರೀಯ ಮಟ್ಟದ ಆಟಗಾರರು ಇಲ್ಲಿ ಸಾಧನೆ ಮಾಡಿದ್ದಾರೆ. ಇಲ್ಲಿರುವ ಹೆಚ್ಚಿನ ಪ್ರತಿಭಾವಂತ ಆಟಗಾರರ ಸಾಧನೆಯ ಹಿಂದಿರುವುದು ಮೂಡಬಿದಿರೆಯ ಆಳ್ವಾಸ್, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಂತಹ ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಸಂಘ ಸಂಸ್ಥೆಗಳು ಕಾರಣ ಎಂದರು.