ಹಕ್ಕು ಪತ್ರ ಪಡೆದರೂ ಸಿಗದ ನಿವೇಶನ: ಕುಪ್ಪೆಪದವು ಗ್ರಾಪಂ ಮುಂದೆ ಸಂತ್ರಸ್ತರಿಂದ ಧರಣಿ
ಮಂಗಳೂರು: ಕುಪ್ಪೆಪದವು ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯಲ್ಲಿ ವಸತಿ ರಹಿತರು, ಮನೆ, ನಿವೇಶನಕ್ಕಾಗಿ ಗ್ರಾಪಂಗೆ ಅರ್ಜಿ ಸಲ್ಲಿಸಿ ದಶಕದಿಂದ ಕಾಯುತ್ತಿದ್ದಾರೆ. ೨೦೧೮ರಲ್ಲಿ ಶಾಸಕ ಭರತ್ ಶೆಟ್ಟಿ ಸಮ್ಮುಖ 98 ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿ ಹಕ್ಕು ಪತ್ರ ವಿತರಿಸಿದರೂ ನಿವೇಶನವನ್ನು ಫಲಾನುಭವಿಗಳಿಗೆ ನೀಡದಿರುವುದನ್ನು ಖಂಡಿಸಿ ಮನೆ-ನಿವೇಶನ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಂತ್ರಸ್ತರು ಕುಪ್ಪೆಪದವು ಗ್ರಾಪಂ ಮುಂದೆ ಸೋಮವಾರ ಧರಣಿ ನಡೆಸಿದರು.
ಧರಣಿಯ ಮಾಹಿತಿ ಪಡೆದ ಮಂಗಳೂರು ಸಹಾಯಕ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಯು ಸ್ಥಳಕ್ಕೆ ತೆರಳಿ ಧರಣಿ ನಿರತರ ಮನವಿ ಸ್ವೀಕರಿಸಿದರು. ಸಂತ್ರಸ್ತ ಫಲಾನುಭವಿಗಳು ಹಾಗೂ ಪಂಚಾಯತ್ ಅಧಿಕಾರಿಗಳಿಂದ ದಾಖಲೆ ಗಳನ್ನು ತರಿಸಿ ಪರಿಶೀಲಿಸಿದರು. ಮಾತುಕತೆಯ ಕೊನೆಯಲ್ಲಿ 17 ಕುಟುಂಬಗಳಿಗೆ 15 ದಿನಗಳಲ್ಲಿ ಮಂಜೂರಾಗಿರುವ ನಿವೇಶನ ಹಸ್ತಾಂತರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಉಳಿದ 81 ಕುಟುಂಬಗಳಿಗೆ ಮಂಜೂರಾಗಿರುವ ನಿವೇಶನದ ಜಮೀನು ಸಮತಟ್ಟು, ಮರಮಟ್ಟು ತೆರವಿಗೆ ಅಂದಾಜು 15 ಲಕ್ಷ ರೂಪಾಯಿ ಅನುದಾನ ಅಗತ್ಯವಿದ್ದು, ಈ ಕುರಿತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಧರಣಿ ನಿರತರಿಗೆ ಭರವಸೆ ನೀಡಿದರು.
ಧರಣಿಯಲ್ಲಿ ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಕಾರ್ಮಿಕ ನಾಯಕ ಸದಾಶಿವ ದಾಸ್, ಹೋರಾಟ ಸಮಿತಿಯ ಸಂಚಾಲಕಿ ವಸಂತಿ ಕುಪ್ಪೆಪದವು, ಗ್ರಾಪಂ ಉಪಾಧ್ಯಕ್ಷರಾದ ಮುಹಮ್ಮದ್ ಶರೀಫ್ ಕಜೆ, ಸಿಪಿಎಂ ಮುಖಂಡರಾದ ವಾರಿಜ ಕುಪ್ಫೆಪದವು, ಬೇಬಿ ನಾಯ್ಕ್, ಸುಂದರ ನಾಯ್ಕ್, ಕುಸುಮ ಕುಪ್ಪೆಪದವು, ಭವಾನಿ ಕುಪ್ಪೆಪದವು ಮತ್ತಿತರರು ಪಾಲ್ಗೊಂಡಿದ್ದರು.