ಆಸ್ತಿ ತೆರಿಗೆ ಏರಿಕೆ ಮಾಡುವ ಪಾಲಿಕೆಯು ತೆರಿಗೆ ಸೋರಿಕೆ ತಡೆಗಟ್ಟಲಿ: ಬಜೆಟ್ ಕುರಿತ ಸಲಹಾ ಸಭೆಯಲ್ಲಿ ಸಾರ್ವಜನಿಕರ ಆಗ್ರಹ
ಮಂಗಳೂರು, ಜ. 8: ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ಶುಲ್ಕ ಇನ್ನೂ ಪೈಸೆಗಳ ಆಧಾರದಲ್ಲಿದೆ. ಶಾಲಾ ಕಾಲೇಜುಗಳಿಂದ ವಸೂಲು ಮಾಡಬೇಕಾದ ಸೇವಾ ತೆರಿಗೆ ಇನ್ನೂ ಯಾವ ಶಾಲಾ ಕಾಲೇಜಿನಿಂದಲೂ ಸಂಗ್ರಹಿಸ ಲಾಗಿಲ್ಲ. ಆದರೆ ಮೂರು ವರ್ಷಕ್ಕೊಮ್ಮೆ ಸಾರ್ವಜನಿಕರ ಆಸ್ತಿ ತೆರಿಗೆ ದರವನ್ನು ವಸೂಲು ಮಾಡಲಾಗುತ್ತದೆ. ನೀರಿನ ದರ ಹೆಚ್ಚಳ ಮಾಡಲಾಗುತ್ತದೆ. ಈ ರೀತಿಯಾಗಿ ಸಾರ್ವಜನಿಕರ ಮೇಲೆ ಹೊರೆ ಹಾಕುವ ಮನಪಾ ತೆರಿಗೆ ಸೋರಿಕೆ ತಡೆಗಟ್ಟಿ ದರೆ ಕೋಟ್ಯಾಂತರ ರೂ. ಆದಾಯ ಗಳಿಸಲು ಸಾಧ್ಯವಾಗಲಿದೆ ಎಂಬ ಮಾತುಗಳು ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಮೇಯರ್ ಮನೋಜ್ ಕೋಡಿಕಲ್ ಅಧ್ಯಕ್ಷತೆಯಲ್ಲಿ ಬುಧವಾರ ಮನಪಾ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾದ ತೆಬಜೆಟ್ ಪೂರ್ವ ಸಾರ್ವಜನಿಕ ಸಲಹೆ ಸೂಚನಾ ಸಭೆಯಲ್ಲಿ ತೆರಿಗೆ ಸೋರಿಕೆ ತಡೆಗಟ್ಟುವ ಕುರಿತಂತೆ ಹಲವರು ಅಭಿಪ್ರಾಯಗಳನ್ನು ಮಂಡಿಸಿದರು.
ಆರಂಭದಲ್ಲಿ ಮಾತನಾಡಿದ ಹನುಮಂತ ಕಾಮತ್, ಕಟ್ಟಡ ಪರವಾನಿಗೆ ದರ 92-93ರ ಬಳಿಕ ಹೆಚ್ಚಳವಾಗಿಲ್ಲ. ಆ ಅವಧಿಯಲ್ಲಿದ್ದ ಪೈಸೆಗಳ ದರದಲ್ಲೇ ಇನ್ನೂ ಕಟ್ಟಡ ಪರವಾನಿಗೆ ದರ ವಿಧಿಸಲಾಗುತ್ತಿದೆ. ಕಳೆದ 10 ವರ್ಷಗಳಿಂದ ಪ್ರತಿ ಬಜೆಟ್ ಪೂರ್ವಸಭೆಯಲ್ಲಿ ಈ ಬಗ್ಗೆ ಸಲಹೆ ನೀಡಲಾಗುತ್ತಿದ್ದರೂ ಪಾಲನೆಯಾಗುತ್ತಿಲ್ಲ ಎಂದು ಆಕ್ಷೇಪಿಸಿದರು.
ನೀರಿನ ದರ ಏರಿಕೆ ಮಾಡಲಾಗುತ್ತದೆ. ಆದರೆ ಬಾಕಿ ಉಳಿಸಿಕೊಂಡವರ ದರ ವಸೂಲಿಗೆ ಕ್ರಮ ಆಗುತ್ತಿಲ್ಲ. ಕವಿತಾ ಸನಿಲ್ ಮೇಯರ್ ಆಗಿದ್ದ ವೇಳೆ ಬಾಕಿ ದರ ವಸೂಲಾತಿಯ ಅಭಿಯಾನ ಮಾಡಲಾಗಿತ್ತು. ಆ ಸಂದರ್ಭದಲ್ಲಿ 16 ಕೋಟಿ ರೂ. ಬಾಕಿ ಇದ್ದು, ಇದೀಗ ಅದು 60 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಹೋರ್ಡಿಂಗ್ಗಳ ದರ ಕಳೆದ 20 ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಉರ್ವಾ ಮಾರುಕಟ್ಟೆ ಉದ್ಘಾಟನೆಯಾಗಿ ಆರು ವರ್ಷಗಳಾಗಿವೆ. ಆದರೆ ಅದು ಉಪಯೋಗಕ್ಕೇ ಬಂದಿಲ್ಲ. ಅಳಕೆ, ಕದ್ರಿ ಮೊದಲಾದ ಮಾರುಕಟ್ಟೆಗಳನ್ನು ಕೋಟಿ ರೂ. ಖರ್ಚು ಮಾಡಿ ನಿರ್ಮಿಸಲಾಗಿದ್ದರೂ ನಗರದ ವ್ಯಾಪಾರಿಗಳಿಗೆ ಪೂರಕವಾಗಿ ಆಗದಿರುವ ಕಾರಣ ಇನ್ನೂ ಉಪಯೋಗಿಸಲಾಗುತ್ತಿಲ್ಲ. ಆರ್ಟಿಓದಲ್ಲಿ ದ್ವಿಚಕ್ರಹಾಗೂ ಚತುಷ್ಚಕ್ರ ವಾಹನ ನೋಂದಣಿ ಸಂದರ್ಭ ನಿಗದಿತ ದರ ಸಂಗ್ರಹಿಸಲಾಗುತ್ತದೆ. ಅದು ವಸೂಲಿ ಆಗಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮನಪಾ ತೆಇಗೆ ಸಂಗ್ರಹವಾಗಬೇಕು. ಆದರೆ ಅದು ಮನಪಾಕ್ಕೆ ಬರುತ್ತಿಲ್ಲ. ಈ ಮೂಲಕ ಕೋಟಿಗಟ್ಟಲೆ ಪಾಲಿಕೆಯ ಆದಾಯ ಸೋರಿಕೆಯಾಗುತ್ತಿದೆ ಎಂದರು.
ಉಮಾನಾಥ ಕೋಟೆಕಾರು ಮಾತನಾಡಿ, ಪಚ್ಚನಾಡಿ ತ್ಯಾಜ್ಯ ಸಂಸ್ಕರಣೆಯ ಕುರಿತಂತೆ ಗಂಭೀರವಾಗಿ ಪರಿಗಣಿಸಬೇಕು. ಹಸಿ ಕಸವನ್ನು ಹೊರತುಪಡಿಸಿ ಹಸಿರು ಮತ್ತು ಒಣ ತ್ಯಾಜ್ಯ ಪಚ್ಚನಾಡಿಗೆ ಹೋಗದಂತೆ ಕ್ರಮ ವಹಿಸುವ ಜತೆಗೆ ವಾರ್ಡ್ ಮಟ್ಟದಲ್ಲಿ ಮಾರ್ಶಲ್ಗಳನನುನೇಮಕ ಮಾಡಿ ತ್ಯಾಜ್ಯ ನಿರ್ವಹಣೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಿದರೆ ಪಾಲಿಕೆಗೆ ಆದಾಯ ಸಂಗ್ರಹ ಸಾಧ್ಯವಾಗಲಿದೆ ಎಂದರು.
ಈಗಾಗಲೇ ಕೊರೋನಾ ಬಳಿಕ ಸಾರ್ವಜನಿಕವಾಗಿ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು, ಮನಪಾದಲ್ಲಿ ಖಾಲಿ ಜಾಗಕ್ಕೂ ತೆರಿಗೆ ವಿಧಿಸಲಾಗುತ್ತಿದೆ. ಆದರೆ ತೆರಿಗೆ ಮಾತ್ರ ವಸೂಲು,ಅಗತ್ಯ ರಸ್ತೆ, ಒಳಚರಂಡಿ ವ್ಯವಸ್ಥೆ ಆಗಿಲ್ಲ. ಬೀದಿ ಬದಿಗಳಲ್ಲಿನ ಫಾಸ್ಟ್ ಫುಡ್ಗಳ ಮೇಲೆಯೂ ತೆರಿಗೆ ವಿಧಿಸುವ ಮೂಲಕ ಪಾಲಿಕೆಗೆ ಆದಾಯ ಸಂಗ್ರಹಿಸಬೇಕು ಎಂದು ಆಲ್ವಿನ್ ಡಿಸೋಜಾ ಸಲಹೆ ನೀಡಿದರು.
ಕರಡು ಬಜೆಟ್ ಪ್ರತಿಯನ್ನು ಪಾಲಿಕೆ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಗಣನೆಗೆ ಪಡೆದ ಸಲಹೆಗಳನ್ನೂ ಅದರಲ್ಲಿ ಪ್ರಕಟಿಸಬೇಕು. ಬಳಿಕ ಅಂತಿಮ ಬಜೆಟ್ ಪ್ರತಿಯನ್ನೂ ವೆಬ್ಸೈಟ್ನಲ್ಲಿ ಸಾರ್ವಜನಿಕಗೊಳಿಸಬೇಕು ಎಂದು ಪ್ರತಾಪ್ ಚಂದ್ರ ಕೆದಿಲಾಯ ಸಲಹೆ ನೀಡಿದರು.
ನಗರದಲ್ಲಿ ಈಗಾಗಲೇ ಜಾಗವೇ ಇಲ್ಲದಿರುವಾಗ ಸರ್ವಿಸ್ ಬಸ್ಸು ನಿಲ್ದಾಣಕ್ಕೆ ಕಾದಿರಿಸಲಾದ ಜಾಗದಲ್ಲಿ ಕಸದ ವಾಹನ ನಿಲ್ಲಿಸುವ ವ್ಯವಸ್ಥೆಗಾಗಿ 45 ಲಕ್ಷ ರೂ. ಖರ್ಚು ಮಾಡಲಾಗಿದೆ. ಅಲ್ಲಿ ಗಿಡಗಳನ್ನು ನೆಡಲಾಗಿದ್ದು, ಈ ರೀತಿ ಪಾಲಿಕೆಯ ಆಸ್ತಿಯನ್ನು ದುರ್ಬಳಕೆ ಮಾಡಲಾಗುತ್ತಿದೆ. ಪಾಲಿಕೆಯ ಸ್ವಚ್ಛತಾ ಕಾರ್ಯಕ್ಕಾಗಿ ಕೋಟಿಗಟ್ಟಲೆ ಹಣ ವ್ಯಯ ಮಾಡಿ 24 ಇ ಸೈಕಲ್ಗಳನ್ನು ಖರೀದಿಸಲಾಗಿದೆ. ಅದರಲ್ಲಿ ಕೆಲವು ಕದ್ರಿ ಬಳಿ ಪಾಲು ಬಿದ್ದಂತಿವೆ. ನಗರ ಹಲವು ಕಡೆ ಇನ್ನೂ ಬಸ್ಸು ನಿಲ್ದಾಣವೇ ಇಲ್ಲ. ಹಂಪನಕಟ್ಟೆ ಬಳಿ ಇದ್ದ ಬಸ್ಸು ನಿಲ್ದಾಣವನ್ನೂ ತೆರವುಗೊಳಿಸುವ ಮೂಲಕ ಪಾಲಿಕೆ ಅನಗತ್ಯ ಖರ್ಚು ವೆಚ್ಚಗಳಿಗೆ ಕಾರಣವಾಗುತ್ತಿದೆ ಎಂದು ಜಿ.ಕೆ. ಭಟ್ ಆಕ್ಷೇಪಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ 12500 ಉದ್ದಿಮೆ ಪರವಾನಿಗೆ ನೀಡಲಾಗಿದೆ. ಇನ್ನೂ 15000 ಉದ್ದಿಮೆ ಪರವಾನಿಗೆ ನೀಡಬಹುದು. ಈ ಮೂಲಕ ಸುಮಾರು 60 ಕೋಟಿ ರೂ. ಆದಾಯ ಗಳಿಸಬಹುದು. ಕೋಅಪರೇಟಿವ್ ಸೊಸೈಟಿಗಳಿಗೆ ಪರವಾನಿಗೆ ನೀಡಲಾಗುತ್ತಿಲ್ಲ. ಉದ್ಯಾನವಗಳಿಗೆ ಕೋಟಿಗಟ್ಟಲೆ ಖರ್ಚು ಮಾಡಿದರೂ ಆದಾಯ ಸಂಗ್ರಹವಾಗುತ್ತಿಲ್ಲ. ಹಾಸ್ಟೆಲ್, ಪಿಜಿಗಳಿಂದಲೂ ತೆರಿಗೆ ವಸೂಲು ಮಾಡಲಾಗುತ್ತಿಲ್ಲ ಎಂದು ಎಂ.ಪಿ. ಶೆಟ್ಟಿ ಅಭಿಪ್ರಾಯಿಸಿದರು.
ಸಾರ್ವಜನಿಕರ ಪರವಾಗಿ ಕಿಶೋರ್ ಅತ್ತಾವರ, ಬೆನೆಡಿಕ್ಟ್ ಫೆರ್ನಾಂಡಿಸ್, ಮ್ಯಾಕ್ಸಿಂ ಡಿಸೋಜಾ, ಸುರೇಶ್ ನಾಯಕ್, ಪಿ. ಸುಧಾಕರ ಕಾಮತ್, ಜಯಕೃಷ್ಣನ್, ಎಸ್.ಎಲ್. ಪಿಂಟೋ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಉಪ ಮೇಯರ್ ಭಾನುಮತಿ, ವಿಪಕ್ಷ ನಾಯಕ ಅನಿಲ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣ ಮಂಗಳ, ಕದ್ರಿ ಮನೋಹರ ಶೆಟ್ಟಿ, ಸುಮಿತ್ರ, ಸರಿತಾ ಶ್ರೀಧರ್, ಪಾಲಿಕೆ ಉಪ ಆಯುಕ್ತ ರವಿ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಸಭೆ ತಡವಾದರೂ ಸಹನೆ ಕಾಯ್ದ ಸಾರ್ವಜನಿಕರು!
ಪಾಲಿಕೆಯ ಬಜೆಟ್ ಪೂರ್ವಭಾವಿಯಾಗಿ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಆಲಿಸುವ ನಿಟ್ಟಿನಲ್ಲಿ ಗುರುವಾರ ಸಂಜೆ 3.30ಕ್ಕೆ ಸಭೆ ನಿಗದಿಯಾಗಿತ್ತು. ಆದರೆ ಮೇಯರ್ ಮನೋಜ್ ಕೋಡಿಕಲ್ ಸಭೆಗೆ ಆಗಮಿಸುವ ವೇಳೆಗೆ 4.20 ಆಗಿತ್ತು. ಪಾಲಿಕೆ ಸಭಾಂಗಣದಲ್ಲಿ ಸೇರಿದ್ದ ಸಾರ್ವಜನಿಕರು ಸುಮಾರು 50 ನಿಮಿಷಗಳ ಕಾಲ ಸಹನೆಯಿಂದ ಕಾದು ಕುಳಿತಿದ್ದರು. ಸಭೆಗೆ ಆಗಮಿಸಿದ ಮೇಯರ್ ಅನ್ಯ ಕಾರ್ಯಕ್ರಮದ ನಿಮಿತ್ತ ತಡವಾಗಿರುವುದಾಗಿ ಕ್ಷಮೆ ಕೋರಿದರು. ಬಜೆಟ್ ಪೂರ್ವ ಸಾರ್ವಜನಿಕರಿಂದ ಸಲಹೆಗಳನ್ನು ಆಲಿಸಲಾಗುತ್ತದೆ. ಆದರೆ ಅವುಗಳನ್ನು ಅನುಷ್ಟಾನಕ್ಕೆ ತರುವುದಿಲ್ಲ ಎಂಬ ಅಸಮಾಧಾನದ ಮಾತುಗಳು ಸಾರ್ವಜನಿಕರಿಂದ ವ್ಯಕ್ತವಾಯಿತು.