ಲಂಚ ಪ್ರಕರಣ: ಮುಲ್ಕಿ ಕಂದಾಯ ನಿರೀಕ್ಷಕನ ಜಾಮೀನು ಅರ್ಜಿ ವಜಾ
ಮಂಗಳೂರು, ಜ.8: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಕಳೆದ ವರ್ಷದ ಡಿ. 19ರಂದು ಸಿಕ್ಕಿ ಬಿದ್ದು ಜೈಲು ಸೇರಿರುವ ಮುಲ್ಕಿಯ ಕಂದಾಯ ನಿರೀಕ್ಷಕ ಜಿ.ಎಸ್. ದಿನೇಶ್‌ನ ಜಾಮೀನು ಅರ್ಜಿಯನ್ನು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ.
ಆರೋಪಿಯು 4 ಲಕ್ಷ ರೂ.ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಜೈಲು ಪಾಲಾಗಿದ್ದರು. ನ್ಯಾಯಾಲಯವು ಆರೋಪಿಗೆ ಜ.8ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಬುಧವಾರ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಂಧ್ಯಾ ಎಸ್. ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದಿಸಿದ್ದರು. ಆರೋಪಿಗೆ ನ್ಯಾಯಾಂಗ ಬಂಧನ ಮುಂದುವರಿಸಲಾಗಿದೆ ಎಂದು ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕ ನಟರಾಜ ಎಂ.ಎ. ತಿಳಿಸಿರುತ್ತಾರೆ.
ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿಲೇವಾರಿಯಾಗದ ಕಡತವು ಲೋಕಾಯುಕ್ತ ದಾಳಿಯ ಬಳಿಕ ಸರಕಾರ ನಿಗದಿಪಡಿಸಿದ ಕೇವಲ 210 ರೂ. ಶುಲ್ಕವನ್ನು ಪಡೆದು ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳ ಸೇರ್ಪಡೆಯಾಗುತ್ತಿದೆ ಎಂಬುದಾಗಿ ದೂರುದಾರರು ತಿಳಿಸಿರುವುದಾಗಿ ಪ್ರಕಟನೆ ತಿಳಿಸಿದೆ.