ಆಯುಷ್ಮಾನ್ ಆರೋಗ್ಯ ಯೋಜನೆ ಜಾರಿಗೊಳಿಸಲು ರಾಜ್ಯ ಸರಕಾರ ನಿರಾಸಕ್ತಿ: ಬಿಜೆಪಿ ವಕ್ತಾರೆ ಸುರಭಿ ಹೊಡಿಗೆರೆ ಆರೋಪ
ಮಂಗಳೂರು: ಕೇಂದ್ರ ಸರಕಾರ 70ಕ್ಕಿಂತ ಅಧಿಕ ವಯೋಮಾನದವರಿಗೆ ಜಾರಿಗೊಳಿಸಿದ ಆಯುಷ್ಮಾನ್ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರಕಾರವು ಆಸಕ್ತಿ ತಾಳುತ್ತಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರೆ ಸುರಭಿ ಹೊಡಿಗೆರೆ ಆರೋಪಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಶಿಶು, ಬಾಣಂತಿ ಸಾವು, ಆಯುಷ್ಮಾನ್‌ನಡಿ ಚಿಕಿತ್ಸೆಗೆ ಅವಕಾಶ ಸಿಗದೆ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಲ್ಲಿ ರಾಜ್ಯ ಸರಕಾರವು ಜವಾಬ್ದಾರಿಯುತವಾಗಿ ಕೆಲಸ ಮಾಡಿಲ್ಲ. ಬಾಣಂತಿಯರ ಸಾವು, ಔಷಧ ಪೂರೈಕೆಯಲ್ಲಿನ ನ್ಯೂನತೆಗಳ ಬಗ್ಗೆ ವೈದ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಸರಕಾರ ಕಣ್ಣುಚ್ಚಿ ಕುಳಿತ ಕಾರಣ ಗೊಂದಲಗಳು ಸೃಷ್ಟಿಯಾಗಿದೆ. ಕೇಂದ್ರದ 2.2 ಆವಾಸ್ ಯೋಜನೆಯಲ್ಲಿ ದೇಶದ 29 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳು ಸೇರ್ಪಡೆಯಾಗಿದ್ದರೂ ಕರ್ನಾಟಕ ಸೇರ್ಪಡೆಯಾಗಿಲ್ಲ ಎಂದು ಸುರಭಿ ಹೊಡಿಗೆರೆ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಾಜಗೋಪಾಲ ರೈ, ಸತೀಶ್ ಪ್ರಭು, ಡೊಂಬಯ್ಯ ಅರಳ, ವರುಣ್‌ರಾಜ್, ಅರುಣ್ ಶೇಟ್, ವಸಂತ ಪೂಜಾರಿ ಉಪಸ್ಥಿತರಿದ್ದರು.