ಅಮೃತರದ್ದು ಮೃದು ಸ್ವಭಾವ ತೀಕ್ಷ್ಣ ವೈಚಾರಿಕತೆ: ಮಹಾಲಿಂಗ ಭಟ್
ಅಮೃತರ 'ಒಲುಮೆ'ಯಲ್ಲಿ ಭಾವಾಮೃತ
ಮುಡಿಪು,ಡಿ.11;ಸಾಹಿತಿ, ಸಂಶೋಧಕ ದಿ.ಅಮೃತ ಸೋಮೇಶ್ವರರ ಅಡ್ಕದ ಮನೆಯಂಗಳದ ವೇದಿಕೆಯಲ್ಲಿ ಶನಿವಾರ ಸಂಜೆ ಅಮೃತರ ನೆನಪು ಮತ್ತು ಅವರ ಭಾವಗೀತೆ ಹಾಗೂ ಯಕ್ಷಗಾನ ಪದ್ಯಗಳ ಗಾಯನದ ' ಭಾವಾಮೃತ' ಕಾರ್ಯಕ್ರಮ ನಡೆಯಿತು. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ರೋಟರಿ ಸಮುದಾಯದಳ ಕೊಲ್ಯ ಹಾಗೂ ಯುವವಾಹಿನಿ ಕೊಲ್ಯ ಸಂಘಟನೆಗಳು ಕಾರ್ಯಕ್ರಮವನ್ನು ಆಯೋಜಿಸಿತ್ತು.
ಅಮೃತ ಸೋಮೇಶ್ವರರ ವ್ಯಕ್ತಿತ್ವದ ನೆನಪು ಮಾಡಿದ ಮಂಗಳೂರಿನ ಸಂತ ಅಲೋಶಿಯಸ್ ವಿವಿಯ ಕನ್ನಡ ಪ್ರಾಧ್ಯಾಪಕ ಡಾ.ಮಹಾಲಿಂಗ ಭಟ್ ' ಅಮೃತರು ಸೇಡಿಯಾಪು ಶಿಷ್ಯರಾಗಿ ಅಧ್ಯಾಪನ ಆರಂಭಿಸಿದವರು. ಪಾರ್ತಿಸುಬ್ಬ ಊರಿನ ಬಗೆಗೆ ಕಾರಂತರ ಎತ್ತಿದ ಪ್ರಶ್ನೆಗೆ ಕುಕ್ಕಿಲರು ಸಾಧಾರವಾಗಿ ಉತ್ತರಿಸಲು ಹೊರಟಾಗ ಅವರಿಗೆ ಬಲಗೈಯಾಗಿ ನಿಂತವರು ಅಮೃತರು. ಪಾರ್ತಿಸುಬ್ಬನಿಗೆ ಕಥಕ್ಕಳಿ, ರಾಮನಾಟ್ಟಂ ಪ್ರಭಾವದ ಮೂಲವನ್ನು ಒಡನಾಡಿ ಮಲಯಾಳಿ ಅಧ್ಯಾಪಕರ ಸಹಾಯದಿಂದ ತೋರಿಸಿಕೊಟ್ಟವರೇ ಅಮೃತರು ಎಂದರು. ಅಮೃತರ ಮೃದು ಸ್ವಭಾವದ ಜೊತೆಗೆ ತೀಕ್ಷ್ಣ ವಿಮರ್ಶೆಯ, ವೈಚಾರಿಕತೆಯ ಗುಣವೂ ಇತ್ತು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಮಾತನಾಡಿ ಅಮೃತರು ತುಳು ಜಾನಪದ ಅಧ್ಯಯನಕ್ಕೆ ಸಂಶೋಧನೆಗೆ ಆರಂಭಿಕ ಪ್ರಯತ್ನಗಳನ್ನು ಮಾಡಿದವರು. ಹಿರಿಯ ವಿದ್ವಾಂಸರೊಂದಿಗಿನ ಒಡನಾಟದ ಜೊತೆಗೆ ಜನ ಸಾಮಾನ್ಯರೊಂದಿಗೂ ಪ್ರೀತಿಯಿಂದ ಇದ್ದವರು. ನಿಗರ್ವಿಯಾಗಿದ್ದವರು. ಸಂಪಾದಕರಿಗೆ ಪತ್ರ ಬರೆದೂ ತಮ್ಮ ಪ್ರತಿಕ್ರಿಯೆಗಳನ್ನು ದಾಖಲಿಸುತ್ತಿದ್ದರು. ಅವರ ಸೃಜನಶೀಲ ಮತ್ತು ಸಂಶೋಧನೆ ವಿಮರ್ಶೆಗಳಲ್ಲಿ ಗಾಢ ವೈಚಾರಿಕತೆಯಿತ್ತು. ಅವರು ಕರಾವಳಿಯ ಸೌಹಾರ್ದಕ್ಕೆ ಹಂಬಲಿಸಿದವರು ಎಂದರು.
ಸಮಾರಂಭದಲ್ಲಿ ಅಮೃತರ ಮಡದಿ ನರ್ಮದಾ ಸೋಮೇಶ್ವರ್, ಒಡನಾಡಿ ಆನಂದಾಶ್ರಮ ಶಾಲೆಯ ನಿವೃತ್ತ ಶಿಕ್ಷಕ ಕೆ.ಆರ್ ಚಂದ್ರ, ಕೊಲ್ಯದ ರೋಟರಿ ಸಮುದಾಯದಳದ ಅಧ್ಯಕ್ಷ ಸುಂದರ ಸುವರ್ಣ, ಯುವವಾಹಿನಿ ಕೊಲ್ಯ ಇದರ ಅಧ್ಯಕ್ಷೆ ಸುಧಾ ನಾಗೇಶ್, ಲೇಖಕಿ ಶ್ಯಾಮಲಾ ಮಾಧವ್, ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ಸತ್ಯ ಜೀವನ್ ಮತ್ತಿತರರು ಭಾಗವಹಿಸಿದ್ದರು.