ಪ್ರಾಧ್ಯಾಪಕರ ಏಕಾಂಗಿ ಧರಣಿ: ಪಜೀರು ಗ್ರಾಮ ಪಂಚಾಯತ್ ನಿಂದ ಸ್ಪಂದನೆ
ದಫನ ಭೂಮಿಯ ಸಮಸ್ಯೆ ಪರಿಹಾರಕ್ಕೆ ಒತ್ತಾಯ
ಕೊಣಾಜೆ: ದಫನ ಭೂಮಿಯ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಹಿರಿಯ ಪ್ರಾಧ್ಯಾಪಕರೊಬ್ಬರು ಧಪನ ಭೂಮಿಗೆ ಕಾಯ್ದಿರಿಸಿದ ಜಾಗದಲ್ಲೇ ರವಿವಾರದಿಂದ ಏಕಾಂಗಿ ಧರಣಿಯನ್ನು ಆರಂಭಿಸಿದ್ದರು. ಇದೀಗ ಪಜೀರು ಗ್ರಾಮ ಪಂಚಾಯತ್ ಸಮಸ್ಯೆಯ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಗ್ರಾಮಚಾವಡಿ ನಿವಾಸಿಯಾಗಿರುವ ಪ್ರೊ.ಬಿ.ಅಬ್ದುಲ್ ರಹಿಮಾನ್ ಅವರು ಪಜೀರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಚಾವಡಿ ಬಳಿ ಕಾಯ್ದಿರಿಸಲಾಗಿರುವ ದಫನ ಭೂಮಿಯ ಸಮಸ್ಯೆ ಬಗೆಹರಿಸುವಂತೆ ಹಾಗೂ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರವಿವಾರದಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಆರಂಭಿಸಿದ್ದರು.
ಸೊಮವಾರವೂ ಧರಣಿಯನ್ನು ಮುಂದುವರಿಸಿದ್ದರು. ಈ ಬಗ್ಗೆ ಪಜೀರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಫನ ಭೂಮಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳು ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚಿಸಲು ಜ.24ರಂದು ಸಭೆಯನ್ನು ಕರೆಯಲಾಗಿದೆ. ಆದ್ದರಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಕೈ ಬಿಡುವಂತೆ ಪತ್ರದ ಮೂಲಕ ಕೋರಿದ್ದಾರೆ.
ಪಂಚಾಯತ್ ನ ಭರವಸೆಯಂತೆ ಪ್ರಾಧ್ಯಾಪಕ ಪ್ರೊ.ಅಬ್ದುಲ್ ರಹಿಮಾನ್ ಅವರು ಸೋಮವಾರದಂದು ಧರಣಿಯನ್ನು ಕೈ ಬಿಟ್ಟಿದ್ದಾರೆ.